ಕೈಪಿಡಿದೆನ್ನನು ಕಾಪಿಡು ನಲವಿಂ ಕನ್ನಡ ನುಡಿವೆಣ್ಣೆ ಪ.
ಈ ಪಸುಳೆಗೈದಾ ಪಾಪವದಾವುದು ಕೋಪಿಸದಿರೆನ್ನಾಣೆ ಅ.ಪ
ಮುಳಿವಿಂತೇತಕೆ ನಳಿನದಳಾಂಬಕೆ ಎಳೆಗೂಸಿನ ಮನಕೆ
ಕಳವಳದಿಂದತಿ ಬಳಲಿಕೆಯಾದರು ತಳುವುದಿದೇನಿದು ಸಾಕೇ 1
ಮಾತೆಯ ಮಮತೆಗೆ ಸೋತು ಭಜಿಸುವೀ ಪೋತನ ನೆರೆನೋಡಿ
ಪ್ರೀತಿಯಿಂ ಕರೆದಾತುಕೋ ನಲ್ವಾತಿನಿಂ ಕೈನೀಡಿ 2
ಪರಿಪರಿಯೆಡರಿನ ಗಿರಿದುರ್ಗಂಗಳಾವರಿಸಿರುತಿಹುದೆ
ಪರಿಯಿಂದದನುತ್ತರಿಸಿ ಬಂದಪೆ ಕರುಣಿಸು ಭರದೆ 3
ಕಾರ್ಯ ಕಾರಣ ಕರ್ತೃ ನೀನಹುದಾರ್ಯೆ ಸದಾ ಪೊರೆಯೇ
ಕೋರಿಕೆಗಳನೀಡೇರಿಸಿಯಣುಗರ ನಿರಪಾಯದೆ ಕಾಯೇ 4
ಭಾಷೆಗೆ ತಪ್ಪಿದ ದೋಷಿಯೆನ್ನುತುಪೇಕ್ಷಿಸಬೇಡೆನ್ನ
ಶೇಷಗಿರೀಶನೆ ಪೋಷಕನಾಗಿರೆ ನಿರ್ದೋಷಿಯೆನಿಸುವೆ ನೀಂ5