ಯಾವಪರಾಧ ಮಾಡಿದೆನೋ ರಂಗ
ಈ ವಸುಧೆಯೊಳಿನ್ನು ಬಳಲುವೆನೋ ರಂಗ ಪ
ಯಾವ ಪಕ್ಷಿಗೆ ಬಲೆ ಬೀಸಿದೆನೋ ರಂಗ
ಯಾವ ಜೀವಿಗೆ ಗಾಳ ಹಾಕಿದೆನೋ ರಂಗ ಅ.ಪ
ಯಾವ ಎಳಗೂಸನು ಬಾವಿಗೆ ತಳ್ಳಿದೆ
ಯಾವ ತಪಸಿಗೆ ಭಂಗವಗೈದೆ
ಯಾವ ದಂಪತಿಗಳ ಬೇರೆಗೈದೆನೊ ರಂಗ
ಜೀವನು ನಾನೇನ ವಂಚನೆಗೈದೆನೊ 1
ಅಪರಾಧಂಗಳು ವಿಪರೀತವಾದರೂ
ವಿಪುಲ ಕೃಪಾಕರ ನೀನಹುದಯ್ಯ
ಅಪಕೃತಿಗೈದರೂ ಉಪಕೃತಿಗೈವೆ ನೀ
ಕುಪಿತನಾಗದೆ ಕಾಯೋ ಮಾಂಗಿರಿರಂಗ 2