ಧನವು ಇದ್ದರೆ ಸಾಕು ಜನರಿಗೆ
ಧನವು ಇದ್ದರೆ ಸಾಕು ಪ
ಧನದೋರದಾತಗೆ ಗುಣವಿಲ್ಲವನುದಿನ
ಧನವಿಲ್ಲದಾತನು ವನದ ಪಾಮರನು ಅ.ಪ
ತಂದೆ ತಾಯಿಗಳಿಲ್ಲ ಬಂಧುಬಾಂಧವರಿಲ್ಲ
ಹಿಂದುಮುಂದುದಿಸಿದ ತಮ್ಮಂದಿರನೊಲ್ಲ 1
ಒಡವೆಯುಳ್ಳಾತಗೆ ನಡೆಯಬಾರದು ಕಾಲು
ನಡೆವಾಗ ಬಡವರ ಎಡವುತ್ತ ಕಾಣನು 2
ಅರ್ಥವ ಪುಂಜಕನರ್ಥ ಯಥಾರ್ಥವು
ಧೂರ್ತನಾದರು ತಾನು ಕೀರ್ತಿಸಿಕೊಂಬನು 3
ಸೆಡವೆಂಬ ಪುತ್ರನು ಒಡಲೊಳು ಜನಿಸುವ
ಮಡದಿ ಗರ್ವಿತೆಯಾಗಿ ಪಿಡಿದಳು ಕರವನು 4
ಉತ್ತಮೋತ್ತಮನಾಗಿ ಅಧಮನುತ್ತಮನಪ್ಪ
ಮೃತ್ಯುಮಾನಿನಿ ವ್ಯರ್ಥ ಮಗನ ಪಡೆಯುವಳು 5
ಉಡಿಗೆ ಆಭರಣಕ್ಕೆ ನುಡಿಯಬಾರದು ಬಾಯಿ
ಕಿಡಿಯಿಡೆ ಕಂಗಳು ಜಡದ ಕರ್ಣಗಳು 6
ಕಟ್ಟಲು ಅರ್ಥವ ಹೊಟ್ಟೆಯೊಳು ಹಸುವಿಲ್ಲ
ಭ್ರಷ್ಟ ಅನಾಥರ ಶ್ರೇಷ್ಠ ಸೃಷ್ಟಿಯೊಳಾತ 7
ಬಡಮನಸಾಗಿಯೆ ನುಡಿಯ ಬಂದವನೊಳು
ಸಡಗರದಿಂದಲೆ ಸೆಡಕ ತೋರುವನು 8
ಅರಸು ಆತನ ಕಂಡು ಕರೆಸಿ ಉಚಿತವಿತ್ತು
ಸರಸವನಾಡಿ ವಿಹರಿಸುತ್ತಲಿಹನು 9
ಫಣಿಗಿರಿಯೊಳು ನಿಂತ ವರಾಹತಿಮ್ಮಪ್ಪನು
ಹಣವನಿತ್ತವರಿಗೆ ಉಣಿಸುವಭೀಷ್ಟವ 10