ಆಸೆಗೆ ಮೇರೆಯನು ನಿರ್ಮಿಸಿದಿಯಿಲ್ಲವೋ
ಬೇಸರವೆ ಇಲ್ಲಿದಕೆ ಎಷ್ಟಾದರಕಟ ಪ
ಅನ್ನ ಸಿಗದ್ಹೊತ್ತಿನಲಿ ಅನ್ನ ಸಿಕ್ಕರೆ ಸಾಕು
ಅನ್ಯಮೇನೊಲ್ಲೆಂದು ನಿನ್ನ ಕೋರುವುದು
ಅನ್ನ ಚೆನ್ನಾಗಿ ಸಿಗಲು ತಣ್ಣಗಿರದುಂಡುಟ್ಟು
ಹೊನ್ನು ಚಿನ್ನಕೆ ಸೋತು ಬನ್ನಬಡಿವುದಭವ 1
ಕಡುಕ್ಷೇತ್ರ ಮಾನ್ಯತನಗಡವಿ ತುಂಬಿರ್ದರು
ಮಿಡುಕುವುದು ತಡೆಯದೆ ಎಡಬಲದಲಿರುವ
ಬಡವರಾಸೆಗೆ ಕಂಡು ಪಡೆವ ಲವಲವಿಕೆಯಿಂ
ಬಿಡದೆ ಅವರಿಗೆ ಕೆಡುಕು ಹುಡುಕುವುದು ಹರಿಯೆ 2
ಪೊಡವಿಯೆಲ್ಲನು ಒಂದೇ ಕೊಡೆಯಿಂದಾಳಲು ಮತ್ತು
ಪಡೆಯಲಿಚ್ಛಿಪುದಿತರ ಪೊಡವಿಪರ ರಾಜ್ಯ
ಸುಡುಗಾಡು ಕಡೆತನಕ ಸುಡುಸುಡೀ ಆಸೆಯನು
ಬಿಡಿಸೆನ್ನ ರಕ್ಷಿಸೈ ಒಡೆಯ ಶ್ರೀರಾಮ 3