ಕಂಡೆ ನಾಕಂಡೆ ನಾಕಂಡೆ ಕಾಳಿಂಗನ
ಮಂಡೆಯಮೇಲೆ ಕುಣಿವ ಕೃಷ್ಣನ್ನ ಪ
ತಕ ತಕ ಧಿಮಿ ಧಿಮ್ಮಿ ಧಿಮ್ಮಿ ಧಿ-
ಮ್ಮಿಕೆಂದು ಕುಣಿವ ಕೃಷ್ಣನ್ನ ನಾಕಂಡೆ ಅ.ಪ
ಹೆಡೆಯ ಮೇಲೆ ತಾ ಎಡಗಾಲಿರಿಸಿ
ಎಡಗೈಯಲಿ ಬಾಲ ಹಿಡಿದವನ
ಬಿಡದೆ ಅಭಯಹಸ್ತವ ತೋರೊ
ಒಡೆಯ ಕೃಷ್ಣಮೂರುತಿಯ ನಾಕಂಡೆ
ಸ್ವಪ್ನದಲಿ ನಾಕಂಡೆ ಕಂಡೇನೊ
ಸಂಪನ್ನಮೂರ್ತಿಯ ಕಂಡೇನೊ 1
ಗೋವಲರ ಮನೆಯ ಪಾಲುಂಡವನ
ಗೋವುಗಳ ಕಾಯ್ದ ಗೋಪಾಲನ್ನ
ಗೋವಿಂದನೆಂಬ ದೇವರದೇವನ್ನ
ಓವಂತೆ ನಾನು ಕಂಡೇನು ಕಂಡೇನು
ಕುಣಿಯುತ ಬಂದ ಕೃಷ್ಣನ್ನ
ತಣಿಯುವ ಹಾಗೆ ನೋಡಿದೆನು 2
ಗೋವಿಂದನಾಗಿ ತಲೆಕಾಯ್ವವನ
ಗೋವರ್ಧನವನೆ ಕೊಡೆಯಾದವನ
ಗೋವನಿತೆಯರ ಮಾಮಾಯನನ್ನ
ಅವ್ವಯ್ಯ ಚೆನ್ನಾಗಿ ಕಣ್ತುಂಬ ಕಂಡೆ
ಆ ಮುದ್ದು ಬಾಲಕೃಷ್ಣನ್ನ ಕಂಡೆ
ಸಾಮುದ್ರಿಕಾ ಸಿರಿಯನ್ನಕಂಡೆ 3
ಅಸುರ ಕಂಸನ ಅಸುವನ್ನು ನೀಗಿದನ
ಬೆಸೆದ ಕುಬ್ಜೆಯ ಡೊಂಕ ತಿದ್ದಿದವನ
ಅಸುತೆಗೆಯ ಬಂದವಳ ಅಸುವನೆ ಹೀರಿದನ
ಮಿಸುಕದಂತೆ ಕಂಡೆ ನಾಕಂಡೆ ನಾಕಂಡೆ
ಜಾಜಿಪುರೀಶನ ಕಂಡು ಧನ್ಯನಾದೆ
ಸಾಜದಿ ದಾಸಾನುದಾಸನಾದೆ 4
ಪಾಪಿನಾ ಕರುಣೆಯ ತೋರಿ ಸಲಹೊ
ಭಾಪುರೆ ಗಟ್ಟಿಸುವ ಪುಟ್ಟಪಾದವಿಟ್ಟು
ಮೋಪಾಗಿ ಮೆರೆವ ದುಷ್ಟರ ಮೆಟ್ಟೊ
ಪುಂಡರ ಪುಂಡರಿಗೆ ಪುಂಡನಾದವನೆ
ಪುಂಡರೀಕಾಕ್ಷ ಚನ್ನಕೇಶವನೆ 5