ಅಚ್ಯುತಾನಂದ ಗೋವಿಂದ ಎಚ್ಚರಾಗಿರು
ನಂಬಿದವರ ನೋಡನೆಂಬ ತುಚ್ಛನುಡಿಯ ಪಡೆಯದಿರು ಪ.
ಪವನ ಮುಷ್ಟಿವೆಷ್ಟವಿಷವ
ಶಿವನು ಗೆಲಲು ನಿನ್ನ ನಾಮ
ಸ್ತವನಗೈದನೆಂದು ಮಂತ್ರ
ಕವಿಗಳೆಂಬೊ ಕವನವೇನೊ 1
ಭರ್ಮಗರ್ಭಾದಿಗಳು ಪೇಳ್ದ
ಕರ್ಮಕಾಂಡ ನೋಡೆ ದೇವ
ಶರ್ಮ ವರದ ನಿನ್ನ ಸ್ಮರಣೆ
ಮರ್ಮವೆಂದು ಒದರುತಿಹುದು 2
ಮೂರಾರು ಪುರಾಣ ಮಹಾ
ಭಾರತಾದಿ ಕಾವ್ಯಾದಿಗಳ
ಸಾರವರದು ನೋಡೆ ದೀನೋ-
ದ್ಧಾರ ನೀನೆ ತೋರಿಕೊಂಬಿ 3
ಇಂಥನಂತಾನಂತ ಮಹಿಮ
ವಂತ ನೀನೆ ಶರಣನೆಂದು
ಚಿಂತಿಸುವರಾಜನರಿ-
ಗಂತರಾಯವೆಂತಾಗುವುದು 4
ಚಂದನ ಮೂರುತಿಯ ನಂಬಿ
ಕುಂದಿದನೆಂಬಪಕೀರುತಿಯ
ಎಂದೆಂದಿಗು ವಹಿಸದಿರು
ತಂದೆ ಲಕ್ಷ್ಮೀ ವೆಂಕಟೇಶ 5