ಸುಮ್ಮನೇಕೆ ಪರದಾಡುವೆಯೊ ಪರ
ಬೊಮ್ಮನ ಚರಣಕೆ ಶರಣು ಹೊಡಿ
ನಮ್ಮನು ಸೃಜಿಸುವ ಪೊರೆಯುವ ಕೊನೆಯಲಿ
ನಮ್ಮನೇ ನುಂಗುವ ಗುಮ್ಮನಿವ
ನಮ್ಮ ಶರೀರದೊಳಿರುವ ಯಂತ್ರಗಳು
ನಮ್ಮಧೀನವೆ ಯೋಚಿಸೆಲೊ
ವಾತ ನಮ್ಮಾಕಾಂಕ್ಷೆಯೆ ಯೋಚಿಸೆಲೊ 1
ಮೂರಂತಸ್ಥಿನ ನೂರು ಸದನಗಳು
ನೂರು ರೂಪಗಳು ನಿನಗಳವೆ
ಚಾರು ಮನೋಹರ ಸತಿಯಳಿರಲು ಮನ
ಕೋರಿಕೆಯವಳಲಿ ಶಾಶ್ವತವೆ
ನೂರು ಎಕರೆ ಹೊಲ ಗದ್ದೆ ತೋಟಗಳು
ಮೂರು ಲಕ್ಷಗಳು ಬೆಲೆಯಿರಲು
ಮೂರು ಚಟಾಕಿನ ಅನ್ನ ಹೊರತು ಅದ
ಮೀರಿ ನುಂಗುವುದು ನಿನಗಳವೇ 2
ಶೂರನು ನಾ ಬಲುಧೀರನು ನಾ ಅಧಿ
ಕಾರಿಯು ನಾ ಈ ಜಗದೊಳಗೆ
ಕೋರಿದ ಜನರನು ಸದೆಬಡಿಯುವೆ ಎನ
ಗಾರು ಸಮರು ಈ ಧರೆಯೊಳಗೆ
ಕೋರುವ ಸುಖಗಳನನುಭವಿಸುವ ಮಮ
ಕಾರದ ಗತಿಯನು ಯೋಚಿಸೆಲೊ
ಹೇರಳ ಗಜತುರಗಾದಿ ವಾಹನಗ
ಳೇರಿದ ನೀ ಹೆಗಲೇರಿ ಹೋಗುವಿಯೊ 3
ಸಾಸಿರ ಸಾಸಿರ ಬಡ್ಡಿ ಬಾಚಿಗಳ
ಬೇಸರವಿಲ್ಲದೆ ಗಳಿಸಿದೆಯೊ
ಕಾಸಿನ ಲೋಭಕೆ ಮೂಸಲು ಬಾರದ
ಕಾಸಕ್ಕಿ ಅನ್ನವ ನುಂಗಿದೆಯೊ
ಲೇಶವು ಗಮನಕೆ ತರಲಿಲ್ಲ
ಈ ಸವಿನುಡಿ ಬಲು ಹಳೆಯದೆಂದು
ಆಕ್ರೋಶವ ಮಾಡದೆ ಯೋಚಿಸೆಲೊ 4
ಮಾಯವು ತಾ ಈ ಜಗತ್ತಿನ ಜೀವನ
ರುಚಿ ತೋರುವುದು
ಕಾಯವು ಶಾಶ್ವತವೆಂಬ ಭ್ರಾಂತಿಯಲಿ
ಹೇಯ ವಿಷಯಗಳನುಣಿಸುವುದು
ಪ್ರಾಯಶರೆಲ್ಲರು ಬಲ್ಲರಿದನು ಬರಿ
ಬಾಯಲಿ ನುಡಿಯುವರೊ ಸತತ
ಕಾಯವಚನಮನದಿಂದ ಪ್ರಸನ್ನನ
ಮಾಯವನರಿತಾಚರಿಪರು ವಿರಳ 5