(ಉ) ವಿಶೇಷ ಸಂದರ್ಭದ ಹಾಡುಗಳು
486 (1) ಹೆಜ್ಜಾಜಿಕೇಶವಸುಪ್ರಭಾತ
ಏಳಯ್ಯ ಜಾಜಿಪುರೀಶ ಕೇಶವರಾಯ
ಬೆಳಗಾಯಿತೇಳಯ್ಯ ಎದ್ದುರುಳಯ್ಯ ಪ
ಕೋಟೆ ಚನ್ನಿಗನೆಂದು ಹೆಸರಾದವನೆ
ಪೇಟೆ ಚನ್ನಿಗನಾಗಿ ನೆಲೆಸಿರುವವನೆ
ಏಳಯ್ಯ ಬೆಳಗಾಯಿತು 1
ಗರುಡ ವಾಹನನಾಗಿ ಕಣ್ಗಾವಲಾಗಿಹನೆ ಕು-
ದುರೆ ವಾಹನನಾಗಿ ಊರೆಲ್ಲ ಕಾಯುವನೆ
ಏಳಯ್ಯ ಬೆಳಗಾಯಿತು 2
ಶ್ರೀದೇವಿ ಭೂದೇವಿಯರ ನಡುವೆ ಅರಸಾಗಿ
ಬಾಧೆಹೊತ್ತಾಜನರ ಹಾರೈಸುತಿರುವನೆ
ಏಳಯ್ಯ ಬೆಳಗಾಯಿತು 3
ನಾರದರು ತುಂಬುರರು ದೇವತೆಗಳೆಲ್ಲ ಎ-
ದುರಲಿ ನಿಂದು ವಂದಿಸುತಿಹರಲ್ಲ
ಏಳಯ್ಯ ಬೆಳಗಾಯಿತು 4
ವಂದಿ ಮಾಗಧರು ಜಯಘೋಷ ಮಾಡುತ್ತ
ಮಂದಿ ಮಂದಿಯೆ ನಿಂತು ನುತಿಸುತ್ತಿಹರು
ಏಳಯ್ಯ ಬೆಳಗಾಯಿತು 5
ಭಂಟರು ಬಂದು ಮಂಗಳರವದಿಂದ
ಗಂಟೆ ಜಾಗಟೆಗಳ ನುಡಿಸುತಲಿಹರು
ಏಳಯ್ಯ ಬೆಳಗಾಯಿತು 6
ಮುನ್ನಿನ ರವಿಯು ಉದಯಿಸುತಿರುವನು
ಹೊನ್ನಿನ ಕಿರಣಗಳ ಪಸರಿಸುತಿರಿವನು
ಏಳಯ್ಯ ಬೆಳಗಾಯಿತು 7
ಬೀದಿಯ ಜನರೆಲ್ಲ ಬೇಗ ಬೇಗನೆ ಎದ್ದು
ಹಾದಿಯ ಸಿಂಗರಿಸಿ ಕಾಯುತಲಿರುವರು
ಏಳಯ್ಯ ಬೆಳಗಾಯಿತು 8
ಪೇಟೆ ಚೆನ್ನಿಗನ ಕಡೆಯಿಂದ ದಂಡೊಂದು ಭ
ರಾಟೆ ವಾದ್ಯಗಳ ನುಡಿಸುತ್ತ ಬರುತಿಹುದು
ಏಳಯ್ಯ ಬೆಳಗಾಯಿತು 9
ಕೊಂಬು ಕಹಳೆಗಳ ಊದುವರು ಕೆಲವರು
ತುಂಬು ಮಂತ್ರಗಳ ಹೇಳುವರು ವೈಷ್ಣವರು
ಏಳಯ್ಯ ಬೆಳಗಾಯಿತು 10
ಸುಮಂಗಲೆಯರು ಕಳಸ ಹೊತ್ತಿಹರು
ಸುಮ್ಮಾನದಿ ಭಕುತರು ಕುಣಿಯುತಲಿಹರು
ಏಳಯ್ಯ ಬೆಳಗಾಯಿತು 11
ಅಭಯ ಹಸ್ತನೆ ಏಳ ಕಮಲವದನನೆ ಏಳು
ಉಭಯ ಜನರುಗಳೆಲ್ಲ ದರುಶನಕೆ ಕಾದಿಹರು
ಏಳಯ್ಯ ಬೆಳಗಾಯಿತು 12
ನಿನ್ನ ಭಕ್ತರು ನಿಂತು ಧ್ಯಾನ ಮಾಡುತಲಿಹರು
ಎನ್ನರಸ ಜಾಜಿಪುರ ವರದ ಕೇಶವರಾಯ
ಏಳಯ್ಯ ಬೆಳಗಾಯಿತು 13