ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಖ್ಯಪ್ರಾಣ ಕರವೆತ್ತಿ ನಿಂದ ಪ ಹರಿಯೆ ಪರನೆನ್ನದವನ ಹಲ್ಮುರಿವೆನೆಂದು ಅ.ಪ. ಸಿರಿ ರಾಮನಾಜ್ಞೆಯನು ಸಿರದೊಳಾನುತ ಬಂದು ವರಕಪಿಗಳೊಡಗೂಡಿ ಸಿರಿದೇವಿಯನರಸುತ ಶರಧಿತಟಕೆ ಬಂದು ಸಿರಿಪೋದ ಪಥವರಿಯದೆ ಪರಿತೋರದಿರ್ದ ಹರಿವರರಿಗಭಯವಿತ್ತು 1 ಇರುಳು ಇಂದ್ರಜಿತುವಿನ ಶರಹತಿಯಲಳಿದಂಥ ಸಿರಿ ರಾಮ ನೋಡುತ ಮರುಗುತಿರಲಂದು ವರ ಜಾಂಬವನ ಸುಮತಿಯಲಿ ತ್ವರಿತದಿ ಸಂಜೀವನ ಗಿರಿಯ ತಹೆನೆನ್ನುತ 2 ಭರದಿ ದಶಶಿರನು ತಾನರಿಯದೆ ಹನುಮನ ಬಲ ಭರವಸದಲಿ ಮಾಡಿ ಮೂರು ಗುದ್ದಿನ ಪಂಥ ಕರಹತಿಗೆ ಕಂಗೆಟ್ಟು ಧುರವ ಬಿಟ್ಟೋಡುತಿರೆ ಅರಸಿ ಅಸುರನ ಪಿಡಿದ ಹರಿಸು ಋಣವನೆಂದು 3 ದುರುಳ ಕೀಚಕನಂದು ಕರಿಗಮನೆಯನು ಕಂಡು ಸ್ಮರಶರಹತಿಯಿಂದ ಉರುತರದಲಿ ನೊಂದು ಹರಿಣಾಕ್ಷಿಯನು ಬರಿಸಿ ಸೆರಗ್ಹಿಡಿದೆಳೆದುದನು ತರಳೆ ಮುಖದಿ ಕೇಳವನ ಸಿರ ಮುರಿವೆನೆಂದು 4 ಕುರುಪತಿಯ ಸಭೆಯಲಿ ದುರುಪದಿ ಗೈದ ಶಪಥ ಮರೆಯದೆ ದುಶ್ಶಾಸನನ ಧುರದಿ ಕೆಡಹಿ ಕೊಂದು ಉರ ಬಗೆದು ಕರುಳ ನಿಜತರುಣಿಗೆ ಮುಡಿಸುವಾಗ ಬರಲಿ ಬಿಡಿಸುವರೆಂದು ಉರು ಗದೆಯನು ಪಿಡಿದು 5 ಹರಿಹರರು ಸರಿಯೆಂದು ಹರಟುತಿರ್ದವರನು ಗುರುತರ ವಾಕುಗಳೆಂಬ ಬಿರುಬಾಣದಿಂದ ಗರ ಹೊಡೆದವರ ಮಾಡಿ ಪರತತ್ವವನು ಪೇಳಿ ಭರದಿ ನಡೆದೆ 'ಪರಮೋನಹತಿ ಸದೃಶ' ವೆಂದು 6 ಸರುವರಂತರ್ಯಾಖ್ಯ ಹರಿಯಾಜ್ಞಾನುಸಾರ ಸರುವ ಜೀವರಿಗೆ ತಾನು ಗುರುವೆನಿಸಿಕೊಂಡು ಸಿರಿ ರಂಗೇಶವಿಠಲನ ದುರಿತ ಭಯವಿಲ್ಲೆಂದು 7
--------------
ರಂಗೇಶವಿಠಲದಾಸರು