ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ
ಕಾಮಿತಾರ್ಥವನೀವ ಕರುಣಿ ಭೂದೇವಿ ಪ
ಹರಿಯ ಪಾದದಲುದಿಸಿ ಹರಿಗೆ ವಧುವೆನಿಸಿ
ಹರಿಗೆ ಸುತೆಯನು ಇತ್ತು ಹಿರಿಯಳಾದೆ
ಹರಿನಾಮ ಕೀರ್ತನೆಯ ಹೊರೆವ ಧಾರುಣಿ ನಿನ್ನ
ಮೊರೆಹೊಕ್ಕೆ ಮರೆಯದಿರು ಕರುಣದೋರೆನಗೆ 1
ಕ್ಷಮೆ ದಮೆಯು ಶಾಂತ ಸದ್ಗುಣವೊಪ್ಪುವಳೆ ನಿನಗೆ
ಭ್ರಮೆಬಟ್ಟು ಭೂಭುಜರು ಕಡಿದುಕೊಳುತಿಹರು
ಅಮಿತ ಮಹಿಳೆ ನಿನ್ನ ನಿಜವ ಬಲ್ಲವರಾರು
ತಮಗೆ ಋಣವಿದ್ದುದನು ಕೊಂಡೊಯ್ವರಲ್ಲದೆ 2
ಚಿನ್ನ ಭಂಡಾರಗಳು ನಿನ್ನೊಡಲೊಳೊಪ್ಪಿದವು
ಉನ್ನಂತ ರತುನಗಳು ನಿನ್ನೊಳಡಗಿಹವು
ಅನ್ನ ಪಾನಂಗಳಿಗೆ ಬೀಜ ಮೂಲವೆ ನೀನು
ನಿನ್ನ ಮರೆತಿಹ ಜನಕೆ ಮುನ್ನ ಸುಖವುಂಟೆ 3
ಒಬ್ಬ ರಾಯನ ಗೆಲುವೆ ಒಬ್ಬ ರಾಯನಿಗೊಲಿವೆ
ಒಬ್ಬನಿಗೆ ಮೈಯ ನೀನು ಕೊಡುವೆ
ಒಬ್ಬರಾದರು ನಿನ್ನ ನಿಜದಿ ಬಾಳ್ದಪರಿಲ್ಲ
ಗರ್ಭಜಾತನ ಹರಿಯ ಕೈಯ ಕೊಲಿಸಿದೆಲಾ 4
ಅಂಬುಧಿಯೆ ವಸನಗಳು ಕುಂಭ ಕುಚಗಳೆ ಗಿರಿಯು
ಸಂಭ್ರಮದ ನದಿ ಕಾಲುವೆ ನಿನ್ನ ಬೆವರುಗಳು
ಎಂಭತ್ತನಾಲ್ಕು ಲಕ್ಷ ಜೀವರಾಶಿಗಳೆಲ್ಲ
ತುಂಬಿಕೊಂಡಿರುತಿಹುದು ಅಂಗೋಪಾಂಗದಲಿ 5
ಮೂಢನಾದೆನು ನಿನ್ನ ಬೇಡಿಕೊಂಬರೆ ಮನದಿ
ರೂಢಿ ದೇವತೆಯೆ
ಮಾಡು ದಯವನು ನೀನು ಮನದಭೀಷ್ಟವನೆಲ್ಲ
ಪಾಡು ಪಂಥವು ಬೇಡ ಪಡೆದ ಮಗನೊಡನೆ 6
ನಂಬಿದೆನು ನಾ ನಿನ್ನ ಕುಂಭಿನಿಯೆ ಕೈವಿಡಿದು
ಇಂಬಾದ ಪದವಿಯನು ಸಂಭ್ರಮದಿ ಕೊಡುತ
ಬೆಂಬಡದೆ ವರಾಹತಿಮ್ಮಪ್ಪ ಕರುಣದಲಿ
ಹಂಬಲಿಪ ತೆರದಿಂದ ಸಲಹುವುದು ಜಗದಿ 7