ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂದೆ ಮುದ್ದುಮೋಹನ ದಾಸರಾಯರ ಪದವ ಪೊಂದಿದವರಿಗೆ ಕಷ್ಟವೆ ಪ. ಬಂಧನವ ಪರಿಹರಿಸಿ ಸಿಂಧುಶಯನನ ಮೂರ್ತಿ ತಂದು ತೋರುವರು ಮನದಿ | ಮುದದಿ ಅ.ಪ. ಅತಿಶಯದ ತಪದಿಂದ ಪತಿತ ಪಾವನನಂಘ್ರಿ ಮತಿವಂತರಾಗಿ ಭಜಿಸಿ ಪೃಥುವಿಯೊಳಗವತರಿಸಿ ಯತನವಿಲ್ಲದೆ ಕರ್ಮ ಪಥವನ್ನೆ ಕೊನೆಗಾಣಿಸಿ ಪತಿತರಿಗೆ ಅಂಕಿತವ ಹಿತದಿಂದ ಬೋಧಿಸಿ ಅತಿ ಅದ್ಭುತವ ತೋರಿಸಿ ಸುತರಂತೆ ಶಿಷ್ಯರನು ಹಿತದಿಂದನುಗ್ರಹಿಸಿ ಗತಿಯ ಮಾರ್ಗವ ತೋರ್ವರು | ಇವರು 1 ದೇವತೆಗಳೊಡೆಯರು ಪಾವಮಾನಿಗೆ ಪ್ರಿಯರು ಭೂವಲಯದೊಳು ಮೆರೆವರು ಆವಕಾಲದಲಿ ಸುಖಾನಂದಭೋಗಿಗಳು ಪಾವನ ಸುಚರಿತ್ರರು ದೇವ ನರಹರಿ ಕರುಣ ಪೂರ್ಣವಾಗಿ ಪಡೆದು ಭಾವಶುದ್ಧಿಯಲಿಪ್ಪರು ಈ ವಿಧದ ಇವರ ಚರ್ಯೆಯನರಿಯುವರನರಿಯೆ ಕಾವ ಭಕ್ತರ ಕರುಣಿಯ | ದೊರೆಯ 2 `ತ' ಎನಲು ತಪಸಿಯಹ `ದೇ' ಎನಲು ದೇಹ ಶುದ್ಧಿ `ಮು' ಎನಲು ಮುಕ್ತನಾಗ್ವ `ದು' ಎನ್ನಲು ದುರ್ಜನರು ದೂರವಾಗಿರುತಿಹರು `ಮೋ' ಎನಲು ಮೋಕ್ಷದಾರಿ `ಹ' ಎನಲು ಹರಿಬಂದು `ನ' ಎನಲು ನರ್ತಿಸುವ `ದಾ' ಎನಲು ದಾರಿದ್ರನಾಶ `ಸ' ಎನಲು ಸತ್ವಗುಣಿ `ರಾಯ' ಎನೆ ಪದವಾಳ್ವ `ರು' ಎನಲು ಋಜುಮಾರ್ಗಿಯು | ಸುಖಿಯು 3 ಈ ರೀತಿಯಿಂ ತಂದೆ ಮುದ್ದುಮೋಹನದಾಸ ರಾ - ಯರೆಂತೆಂದು ಜಪಿಸೆ ಪಾರುಗಾಣಿಸಿ ಭವದ ಬಂಧನವ ಬಿಡಿಸುವರು ದೇವಾಂಶ ಸಂಭೂತರು ಕಾರುಣ್ಯ ನಿಧಿಗಳು ತೋರುವರು ಹರಿಮಾರ್ಗ ಸಾರಿ ಭಜಿಪರಿಗೆ ಸತತ ನಾರಸಿಂಹನ ಚರಣ ಸೇರಿಸಿ ಹೃದಯದಲಿ ಸೂರೆಗೊಂಡಿಹರು ಮುಕ್ತಿ | ಸುಕೀರ್ತಿ 4 ಅಪಾರ ಅದ್ಭುತದ ಕರ್ಮಗಳ ನಡೆಸಿಹರು ಪಾಪಿ ಜನಗಳ ಪೊರೆವರು ರೂಪ ರೂಪಾಂತರದಿ ತೋರ್ಪರು ಸುಜನರಿಗೆ ಶ್ರೀಪತಿಯ ವರ ಭಕ್ತರು ಕೋಪತಾಪಗಳಿಂದ ನಿರ್ಲೇಪರಾಗಿಹರು ತಾಪತ್ರಯಗಳ ಕಡಿವರು ಗೋಪಾಲಕೃಷ್ಣವಿಠ್ಠಲನ ಪದಧ್ಯಾನವನು ಗೋಪ್ಯದಿಂದಲಿ ಇತ್ತರು | ಇವರು5
--------------
ಅಂಬಾಬಾಯಿ