ನಂದಿಯನೇರಿ ಬರುತಿಹ ಸುಂದರನ್ಯಾರೆ ಪೇಳಮ್ಮಯ್ಯ ಪ.
ಚಂದ್ರಚೂಡ ಗಂಗಾಧರ ಶಂಕರ
ಸುಂದರ ಗೌರೀರಮಣ ಕಣಮ್ಮಾ ಅ.ಪ.
ಕರದಿ ತ್ರಿಶೂಲ ಧರಿಸಿದನಾರೆ ಪೇಳಮ್ಮಯ್ಯ
ವರ ಡಮರುಕಪಾಲ ಪಿಡಿದಿಹನಾರೆ ಪೇಳಮ್ಮಯ್ಯಾ
ಕರುಣವ ತೋರುತ ಸಕಲರ ಮನ ಮಂದಿರದಲಿ
ಪೊಳೆಯುವ ಗಿರಿಜಾ ರಮಣ ಕಣಮ್ಮ 1
ಗಜ ಚರ್ಮಾಂಬರ ಧರಿಸಿಹನಾರೆ ಪೇಳಮ್ಮಯ್ಯ
ತ್ರಿಜUನ್ಮೂರುತಿ ನೊಸಲಿಗೆ ಭಸ್ಮವ ಧರಿಸಿಹನಾರೆ ಪೇಳಮ್ಮಯ್ಯ
ಋಜುಗುಣದೊಡೆಯಗೆ ರಜತಾದ್ರಿನಿಲಯ
ನಿಜ ಪಾರ್ವತೀರಮಣ ಕಣಮ್ಮಾ 2
ಶೇಷನಾಭರಣವ ಧರಿಶಿಹನಾರೆ ಪೇಳಮ್ಮಯ್ಯ
ಸೋಸೀಲಿ ಮೂಗಣ್ಣವನಾರೆ ಪೇಳಮ್ಮಯ್ಯ
ವಾಸುಕಿಶಯನ ಶ್ರೀ ಶ್ರೀನಿವಾಸನ ವಾಸ
ಶಂಭೋ ಶಂಕರನು ಕಣಮ್ಮಾ 3