ಯಮ ತನ್ನ ಪುರದಿ ಸಾರಿದನು
ಎಮ್ಮ ಕಮಲನಾಭನ ದಾಸರ ಮುಟ್ಟದಿರಿಯೆಂದು ಪ.
ಭುಜದಲೊತ್ತಿದ ಶಂಖಚಕ್ರಾಂಕಿತವನ್ನು
ನಿಜ ದ್ವಾದಶನಾಮ ಧರಿಸಿಪ್ಪರಾ
ತ್ರಿಜಗವಂದಿತ ತುಲಸಿಯ ಮಾಲೆ ಹಾಕಿದ
ಸುಜನರಂಗಣವ ಪೊಗದೆ ಬನ್ನಿರೆಂದು 1
ಗೋಪಿಚಂದನ ಬಿಟ್ಟು ದೇಹಕ್ಕೆ ಭಸ್ಮವ
ಲೇಪಿಸಿ ಹರಿಹರರೊಂದೆಂಬ
ಪಾಪಿಗಾಳೆಳತಂದು ಕಣ್ಣು ಕಳಚಿ ಅಂಧ
ತಾಮಸಿನೊಳಗ್ಹಾಕಿ ಕಲ್ಲು ದಬ್ಬಿರೊ ಎಂದು 2
ತಾಳದಂಡಿಗೆ ನೃತ್ಯಗೀತ ಸಮ್ಮೇಳದಿ
ಊಳಿಗವನು ಮಾಳ್ಪ ಹರಿದಾಸರ
ಕೇಳುತಲೊಮ್ಮೆ ಕರಗಳ ಮುಗಿದು ನ -
ಮ್ಮಾಳುಗಳೆನುತ ಪೇಳದೆ ಬನ್ನಿರೆಂದು 3
ಗುರುಮುದ್ರೆಯವನು ತಾನೆಂದು ಪ್ರಾಣಿಗಳ ಮಂ-
ದಿರಕೆ ಪೋಗಿ ಪೋಗಿ ನಿರ್ಬಂಧಿಸಿ
ಬರಿದೆ ಬೈದು ಬಳಲಿಸುವ ಪಾಪಿಗಳ
ಕೊರೆದು ಕುಟ್ಟಿತಂದು ಮುರಿದು ಕೊಲ್ಲಿರೊ ಎಂದು 4
ಅನ್ಯದೈವ ಅನ್ಯಮಂತ್ರ ತಂತ್ರವ ಬಿಟ್ಟು
ಪನ್ನಗಶಯನನೆ ಗತಿಯೆನುತ
ಉನ್ನತ ಹರಿದಿನ ವ್ರತವನಾಚರಿಪ ಪ್ರ-
ಸನ್ನರ ಗುಣವ ಕೆಣಕದೆ ಬನ್ನಿರೆಂದು 5
ಚರ್ಮಕ್ಕೆ ಸಿಡಿ ಊರಿ ಬೇವಿನುಡುಗೆವುಟ್ಟು
ಚಿಮ್ಮುತ ಚೀರುತ ಬೊಬ್ಬೆಗಳಿಡುತ
ಕರ್ಮ ಕೂಗುರಿಯಾಗಿ ಪ್ರಾಣಹಿಂಸೆಯ ಮಾಳ್ಪ
ಬ್ರಹ್ಮೇತಿಕೋರನ ಬ್ಯಾಗನೆ ಎಳತನ್ನಿ 6
ಕೇಶವ ಹರಿ ಅಚಲಾನಂದವಿಠಲನ್ನ
ಶೇಷಗಿರಿಯ ತಿರುಮಲೇಶನ
ದಾಸರ ದಾಸರ ದಾಸನೆಂದೆನಿಸುವ
ದಾಸರ ಗುಣವ ಕೆಣಕದೆ ಬನ್ನಿರಿ ಎಂದು 7