ತರತಮದಿ ಶರಣು ಮಾಡುವೆ ನಿಮಗೆ
ಕರಣಶುದ್ಧಿಯಲ್ಲಿ ಕರುಣ ಮಾಡಿ ಎನ್ನ ಪರಿಪಾಲಿಸಬೇಕು
ನಿರುತ ಬಿಡದೆ ಮನ ಸಿರಿಹರಿ
ಚರಣಕ್ಕೆ ಎರಗುವಂತೆ ವರಭಕುತಿಯಲ್ಲಿ ಪ
ಪರಮೇಷ್ಠಿ ವಾಯು ಸರಸ್ವತಿ ಭಾರತೀ
ಉರಗ ಈಶ ಹರಿ ಸತಿಯರು ಮೂ
ರೆರಡು ಜನರು ಆ ತರುವಾಯ ಸೌಪರ್ಣಿ
ಸಿರಿ ಗುರು ದಕ್ಷನೆ ಶಚಿ ಮರುತ ಪ್ರವಾಹ ಮೂ
ವರು ಸನಕಾದ್ಯರು ದುರಿತಶಾಸನ ಶಶಿ
ತರಣಿ ಶತರೂಪ ವರುಣ ನಾರದರ 1
ಮುನಿಗಳ ಶ್ರೇಷ್ಠ ಭೃಗು ಅನಲ ಪ್ರಸೂತಗಾಧಿ
ತನುಜ ವಾರಿಜಾಜನ್ನತನಯರು ವೈವಸ್ವತ
ಸೂರ್ಯ ದನು ಪ್ರವಾಹವೆಂಬ ಅನಿಲನ್ನ ತಳೋದರಿ
ಅನಿಲದೇವಜ ಅಶ್ವಿನಿ ದೇವತೆಗಳು ಅನಳಾಕ್ಷಸುತ
ಧನಪತಿ ಪ್ರಹ್ಲಾದ ಗುಣಿಸುವೆ ವಸು ಏ
ಳನು ದಶರುದ್ರರು ಇನಿತರೊಳಗೆ ಒಬ್ಬನ ಬಿಟ್ಟನು ದಿನ 2
ದಶ ವಿಶ್ವದೇವತರು ಸ್ವಶನರೊಳಗೆಗೀರ್ವರ
ರಸದ್ಯುನವಕೋಟಿ ತ್ರಿದಶರೂಪ ಪಿತ್ರರೂ
ಎಸವ ಸೋಮ ಪುನರ್ವಾಪಸರಿಪಶತಸ್ಥರು
ನಸುನಗೆ ಕರ್ಮಜ ಋಷಿ ಈರ್ವರು ಮನು
ಕುಶಲ ಸಪ್ತ್ತರಿಗೆ ತುತಿಸೆ ಕಾಲಕಾಲದಿ 3
ಮಾಂಧಾತ ಬಲಿ ಶಶಿಬಿಂದುವೆ ಪ್ರಿಯವ್ರತ
ಪರೀಕ್ಷಿತ ನಂದ ಕಕುಸ್ಥ ಗಯ
ಕುಂದದೆ ಯದುಕುಲದಿಂದ ಬಂದ ಹೈಹಯನು
ಚಂದ್ರನ ಮಡದಿ ಏಳೊಂದನೆ ಸೂರ್ಯನು
ಮಂದಹಾಸಾಂಬುಜ ಬಾಂಧವನಸತಿ
ಕಲದರ್ಪನಸೂಸೆ ವೃಂದಾರಕರಿಗೆ 4
ಸದಮಲ ಸ್ವಾಹಾದೇವಿ ಬುಧಾ ಉಷಾದೇವಿ ಶನಿ
ಮುದದಿಂದ ಪುಷ್ಕರ ಸಹೃದಯ ತುಂಬರರಿಂದ
ಮೊದಲಾಗಿ ನೂರುಮಂದಿ ತ್ರಿದಶ
ಗಂಧರ್ವರು ಚದುರೆ ಊರ್ವಸಿ ರಂಭೆ
ಅದಿತಿ ಕಶ್ಯಪದಿತಿ ಹದಿನಾರು ಸಾವಿರ
ಬುಧನ ಮಕ್ಕಳು ತಪೋನಿಧಿಗಳು ಎಂಭತ್ತು
ತದುಪರಿ ಅಜಾನಜ ತ್ರಿದಶರು ಓಜಸ್ತರೆದರಾಗಿ ನಾನಿಂದು 5
ಹರಿಭಕ್ತರಾದ ಅಪ್ಸರ ಸ್ತ್ರೀಯರು ಕೆಲಕೆಲವು
ಮರಳೆ ಚಿರಾಖ್ಯನಾಮದಿರುತಿಪ್ಪ ಪಿತೃಗಳು
ಪರಿಪರಿ ನೂರುಕೋಟಿ ಪರಮಋಷಿಗಳಿಗೆ
ಸುರ ಗಂಧರ್ವರ ವಿಸ್ತರ ಮನುಜ ಗಂಧರ್ವ
ಧರಿಣಿಜಾಕವಿ ಮೇಲರಿದು ಜಯಂತಗೆ
ಕರ ಮುಗಿವೆ ಕ್ಷಿತಿಪರನು ಕೊಂಡಾಡುತ
ಇರುಳು ಹಗಲು ಉತ್ತಮರ ಮನುಜರ ಪಾಡಿ
ನಿರುತ ಜಂಗಮ ಸ್ಥಾವರಗಳ ನೋಡುತ 6
ಭುಜಗಶಯನನಿಂದ ಸೃಜಿಸಿದ್ದ ಸರ್ವರಿಗೆ
ನಿಜವಾಗಿ ಶಿರವಾಗಿ ಭಜಿಸುವೆ ಚನ್ನಾಗಿ
ತ್ರಿಜಗದೊಳಗೆ ಎನ್ನ ರಜ ತಾಮಸ ಗುಣದ
ವೃಜವೆ ಓಡಿಸಿ ನಿತ್ಯಸುಜನ ಮಾರ್ಗವ ತೋರಿ
ರಜನಿ ಚರಾಂತಕ ವಿಜಯವಿಠ್ಠಲನ್ನ
ಭಜಿಪೆನದಕೆ ನಿಮ್ಮ ನಿಜವ್ಯಾಪಾರದಿ
ಸೃಜಿಸಿ ಕೊಡುತ ಧರ್ಮ ವೃಜಗಳೊದಗಿಸುತ್ತ
ಕುಜನ ಮತದ ಮೇಲೆ ಧ್ವಜವೆತ್ತಿಸುವುದು 7