ಮಾಸ ನಿಯಾಮಕ ದೇವತೆಗಳ ವರ್ಣಿಸುವೆನು ಪ
ಶ್ರೀಶನಾಜ್ಞೆಯಲಿ ಸಕಲ ಸುಜನರಿದ ಕೇಳಿ ಅ.ಪ.
ಸಹವೆಂಬ ಮಾರ್ಗ ಶಿರದಿ ಪುತ್ರ ನಾಮಕ ಸವಿತೃ
ಮಹಾ ವಿಶಾಲಾಕ್ಷಿರಮಣ ಕೇಶವ ನಿಯಾಮಕನು
ಸಹಸ್ಯವೆನಿಪ ಪುಷ್ಯದೊಳು ವಿಷ್ಣುವೆನಿಪನು
ಮಹಲಕುಮಿರಮಣ ನಾರಾಯಣನಿದಕೆ ಕರ್ತೃ 1
ತಪವೆನಿಪ ಮಾಘದೊಳು ಅರುಣನಾಮಕ ಸವಿತೃ
ಚಪಲಾಕ್ಷಿ ರುಕ್ಮಿಣೀರಮಣ ಮಾಧವನು ದೊರೆಯು
ತಪಸ್ಯವೆನಿಪ ಫಾಲ್ಗುಣದಿ ಸೂರ್ಯನೆನಿಪನು
ಸುಪವಿತ್ರೆ ಧಾತ್ರೀಪತಿ ಗೋವಿಂದನಧಿದೇವತೆ2
ಮಧುಮಾಸವಾದ ಚೈತ್ರದೊಳು ವೇದಾಂಗನು
ಪದುಮಾಕ್ಷ ಮಾ ರಮಾರಮಣ ವಿಷ್ಣು ನಿಯಾಮಕನು
ಮಾಧವನೆನಿಪ ವೈಶಾಖದಿ ಭಾನುವೆಂದೆನಿಸುವನು
ಮಧುಸೂದನ ನಾಮಕ ಮೋಹಿನೀ ಪತಿಯು 3
ಶುಕ್ರವೆನಿಪ ಜ್ಯೇಷ್ಠದೊಳು ಇಂದ್ರನೆನಿಪ ಸವಿತೃ ತ್ರಿ
ವಿಕ್ರಮನಿದಕಧಿಪತಿಯು ಪದುಮಾಕ್ಷಿರಮಣ
ಅಕ್ಕರದಿ ಶುಚಿಯೆನಿಪಾಷಾಡದಿ ರವಿಯೆನಿಪನು
ಚಕ್ರಧರ ವಾಮನನಿದರಧಿಪತಿ ಕಮಲಾರಮಣ 4
ನಭವಾದ ಶ್ರಾವಣದಿ ಗಭಸ್ತಿಯೆನಿಸುವನು
ತ್ರಿಭುವನದಧಿಪತಿ ಶ್ರೀಧರನು ಕಾಂತಿಮತಿರಮಣ
ನಭಸ್ಯವೆನಿಪ ಭಾದ್ರಪದದಿ ಯಮನೆನಿಸುವನು
ಇಭವರದ ಹೃಷಿಕೇಶ ಅಪರಾಜಿತಾ ರಮಣ 5
ಒದಗಿಹ ಇಷವೆನಿಪಾಶ್ವೀಜದೊಳು ಸ್ವರ್ಣರೇತಾ
ಇದಕಭಿಮಾನಿ ಪದಮಾವತಿಪತಿ ಪದುಮನಾಭ
ಉದಯಿಸುತಿಹ ಊರ್ಜಿಯೆನಿಪ ಕಾರ್ತಿಕದಿ ದಿವಾಕರ
ರಾಧಾರಮಣ ದಾಮೋದರನಿದರಭಿಮಾನಿ 6
ಆಯಾಯ ಮಾಸದಲಿ ಮಾಳ್ಪ ಸಕಲ ಕರ್ಮಗಳನು
ಆಯಾಯಭಿಮಾನಿ ದೇವರುಗಳಿಗರ್ಪಿಸಿ
ಮಾಯಾರಮಣ ಶ್ರೀ ರಂಗೇಶವಿಠಲನ ನೆನೆಯುತ
ಆಯಾಸವಿಲ್ಲದೆ ಪರಮಪದವನು ಪಡೆಯಿರೊ 7