ಮಾತ್ರೆಯಿದು ಸಜ್ಜನರಿಗಾರೋಗ್ಯ ಮಾತ್ರೆ
ಸೂತ್ರ ನಾರದನಿದಕೆ ನೆನಪಿನಾ ಮಾತ್ರೆ ಪ
ಸಾರ ಪಾಕಗಳಿಲ್ಲ
ಊರೂರಿಗೊಯ್ವುದಕೆ ಭಾರವಲ್ಲ ಅ.ಪ
ಚಾರು ಚೂರ್ಣವಿದಲ್ಲ | ನೀರೊಳಲೆದುದು ಅಲ್ಲ
ಕ್ಷಾರ ಹುಳಿ ಕಹಿಯಿಲ್ಲದೈಶ್ವರ್ಯದಾ ಮಾತ್ರೆ 1
ಇಂದಿರಾಪತಿಯೆಂಬ ಚಂದ್ರೋದಯದ ಮಾತ್ರೆ
ಮಂದರೋದ್ಧಾರನೆಂಬ ಸಿಂಧೂರಮಾತ್ರೆ 2
ನಾರಾಯಣಾಯೆಂಬ ನೀರ ಬೆರಸಿರೋದಿದಕೆ
ಸಾರತರ ರಸಪಾಕ ತೋರುವಾ ಮಾತ್ರೆ3
ಶ್ರೀರಮಣನೆಂಬ ಮಧುಸೇರಲಾ ಮಾತ್ರೆಗಳ
[ಮೂರೊತ್ತು ಸೇವಿಸೆ ಮನಕಹುದು ಹಿತ] 4
ಕರುಣಾಕರಾಯೆಂಬ ವರಸಕ್ಕರೆಯ ಬೆರಸಿ
ಶರಣಜನವರದನೆಂದೊರೆವರು ಸದಾ 5
ಪರಮಾತ್ಮನೆಂಬ ಒರಳೊಳ್ ಹರಿಯೆಂಬ ಗುಂಡಿನಿಂದ
ಅರೆದೊಡದು ಕೇಳಾ ಮಾಂಗಿರಿರಂಗನೆನಿಪಾ 6