ಜಯಮಂಗಳಂ ಶುಭೋದಯ ಮಂಗಳಂ
ಭಯಹರಗೆ ತಿರುಪತಿಯ ವೆಂಕಟೇಶ್ವರಗೆ ಪ
ಸುರಲೋಕವನು ಪಡೆದ ಶಿರದಮಕುಟದ ಪ್ರಭೆಗೆ
ಸ್ಮರಚಾಪವನು ಪೋಲ್ವ ಪುರ್ಬುಗಳ ಚೆಲುವಿಕೆಗೆ
ತುಂಬಿ ತುಳುಕುವ ನಯನಗಳಿಗೆ 1
ಕನಕಕುಂಡಲಗಳಿಗೆ ಘನ ನಾಸಿಕದ ಮಣಿಗೆ
ಮಿನುಗುತಿಹ ಮುಗುಳುನಗೆಯೊಗುವ ಮುಖಕೆ
ಇನಕೋಟಿಪ್ರಭೆಗೆ ಮಿಗಿಲೆನಿಪ ಕೌಸ್ತುಭಮಣಿಗೆ
ವನಮಾಲೆಯನು ಧರಿಸಿ ಶೋಭಿಸುವ ಕಂಠಕೆ 2
ಭುಜವೆರಡರಲಿ ಶಂಖಚಕ್ರಗಳನುರೆ ಧರಿಸಿ
ಅಜಸುರಾದ್ಯರು ಬಿಡದೆ ಭಜಿಪ ಪದವ
ಭಜಿಪರಿಗೆ ಭವಶರಧಿ ಕಟಿಪ್ರಮಾಣವಿದೆಂದು
ಅಜಪಿತನು ತೋರುತಿಹ ಕರಚತುಷ್ಟಯಕೆ 3
ಹದಿನಾಲ್ಕು ಲೋಕಕಾಶ್ರಯವಾಗಿ ತೋರುತಿಹ
ಪದುಮಭವನನು ಪಡೆದ ನಾಭಿಸಹಿತ
ಉದರಮಂಡಲಕೆ ಮತ್ತದರಡಿಯ ಶೋಭಿಸುವ
ಹದಿನಾರು ಬಣ್ಣದಪರಂಜಿ ಕಟಿಸೂತ್ರಕೆ 4
ಕಿರಿಘಂಟೆಸರದೊಡನೆ ಹೊಳೆವ ಪೀತಾಂಬರಕೆ
ಗರುಡನಂಸದಿ ಮೆರೆವ ಊರುಗಳಿಗೆ
ಸುರನದಿಯ ನೆರೆ ಪಡೆದ ಚರಣದುಂಗುಟಗಳಿಗೆತಿರುಪತಿಯ ವೆಂಕಟನ ದಿವ್ಯ ಮೂರುತಿಗೆ 5