ರಕ್ಷಿಸೊ ಎನ್ನ ರಕ್ಷಿಸೋ ಪ
ರಕ್ಷಿಸು ಎನ್ನನು ಅಕ್ಷಯಗುಣಪೂರ್ಣ
ಲಕ್ಷುಮಿರಮಣನೆ ಪಕ್ಷಿವಾಹನನೇ ಅ.ಪ
ಪಾದವಿಲ್ಲದೆ ಜಲದೊಳು ಮುಳುಗಾಡಿ
ವೇದಚೋರಕನನ್ನು ಸೀಳಿ ಬೀಸಾಡಿ
ವೇದಾಚಲದೊಳು ನಿಂತು ಕೈ ನೀಡಿ
ಸಾಧು ಸಜ್ಜನಪಾಲ ನೀ ದಯಮಾಡಿ 1
ವಾರಿಧಿ ಮಥನದಿ ಸುರರಿಗೆ ಒಲಿದು
ಮೇರು ಮಂದರವನ್ನು ನೀ ಹೊತ್ತೆ ಒಲಿದು
ವಾರಿಜಾಕ್ಷನೆ ವೈಕುಂಠದಿಂದಿಳಿದು
ಊರಿದೆ ಚರಣವ ಗಿರಿಯೊಳು ನಲಿದು 2
ಧರಣಿಯ ಒಯ್ದ ದಾನವಗಾಗಿ ನೀನು
ಹರಣದ ಸೂಕರನಂತಾದುದೇನು
ಚರಣ ಸೇವಕರಿಗೆ ನೀ ಕಾಮಧೇನು
ಕರುಣದಿ ಸಲಹೆನ್ನ ನಂಬಿದೆ ನಾನು 3
ತರಳನು ಕರೆಯೆ ಕಂಬದೊಳುದಿಸಿದೆಯೊ
ದುರುಳ ದಾನವರ ಪ್ರಾಣವ ವಧಿಸಿದೆಯೊ
ಕರಳಮಾಲೆಯ ಕೊರಳೊಳು ಧರಿಸಿದೆಯೊ
ಮರಳಿ ಬಂದವ ಫಣಿಗಿರಿಯನೇರಿದೆಯೊ 4
ಕೋಮಲ ರೂಪದಿ ಭೂಮಿಯನಳೆದೆ
ಆ ಮಹಾಬಲಿಯ ಪಾತಾಳಕ್ಕೆ ತುಳಿದೆ
ಸ್ವಾಮಿ ಪುಷ್ಕರಣಿಯ ತೀರದಿ ಬೆಳೆದೆ
ಪ್ರೇಮದಿ ಭಕ್ತರ ಕಾಮಿಸಿ ಪೊರೆದೆ 5
ತಾತನಪ್ಪಣೆಯಿಂದ ಮಾತೆಗೆ ಮುನಿದೆ
ಜಾತಿಕ್ಷತ್ರಿಯರ ವಿಘಾತಿಸಿ ತರಿದೆ
ನೂತನವಾಗಿಹ ನಾಮದಿ ಮೆರೆದೆ
ಧಾತುಗೆಟ್ಟೆನು ಸ್ವಧೈರ್ಯಗಳಿರದೆ 6
ದಶರಥನುದರದಿ ಶಿಶುವಾಗಿ ಬಂದೆ
ವಸುಮತಿ ತನುಜೆಯ ಕುಶಲದಿ ತಂದೆ
ಅಸುರರ ಹೆಸರನುಳಿಸದೆ ನೀ ಕೊಂದೆ
ಕುಸುಮನಾಭನೆ ಶೇಷಗಿರಿಯಲ್ಲಿ ನಿಂದೆ 7
ಮಧುರೆಯೊಳುದಿಸಿ ಗೋಕುಲದಲ್ಲಿ ಬೆಳೆದೆ
ಉದಧಿಯ ಮಧ್ಯದಿ ದುರ್ಗವ ಬಲಿದೆ
ಹದಿನಾರು ಸಾವಿರ ಸತಿಯರ ನೆರೆದೆ
ಉದಯವಾದೆಯೊ ವೇದಗಿರಿಯೊಳು ನಲಿದೆ 8
ಶಶಿಮುಖಿಯರನು ಮೋಹಿಸುವಂಥ ಬಗೆಗೆ
ವ್ಯಸನವ ಬಿಡುವುದುಚಿತವೇನೊ ನಿನಗೆ
ವಸುಧೆಗುತ್ತಮವಾಗಿ ಎಸೆವಂಥ ಗಿರಿಯೊಳು
ಹಸನಾಗಿ ನಿಂತಿಹ ಚರಣ ಸನ್ನಿಧಿಯೊಳು 9
ವಾಜಿಯನೇರಿಯೆ ನೇಜಿಯ ಪಿಡಿದೆ
ಮಾಜುವ ಕಲಿಯನ್ನು ಕಡೆಯೊಳು ಕಡಿದೆ
ಮೂಜಗದೊಡೆಯನ ಮನದೊಳು ಇಡುವೆ
ಮಾಜ ಬೇಡೆಲೊ ವೇಂಕಟೇಶ ಎನ್ನೊಡವೆ 10
ಹತ್ತವತಾರದ ವಿಸ್ತಾರದಿಂದ
ಕರ್ತು ವರಾಹತಿಮ್ಮಪ್ಪನು ನಿಂದ
ಭೃತ್ಯವತ್ಸಲನಾಗಿ ಭೂಮಿಗೆ ಬಂದ
ಅರ್ಥಿಯೋಳ್ಭಕ್ತರ ಸಲಹುವೆನೆಂದ 11