ಅಚ್ಯುತಾನಂತನೆ ನಿನ್ನ ನೆಚ್ಚಿಕೊಂಡಿಹೆನು
ಇಚ್ಛಾರೂಪ ಸ್ವಚ್ಛಾಭೂಪ ಸ್ವೇಚ್ಛೋಪಾತ್ತ ಸಗುಣ ರೂಪ ಪ.
ನಾಮತ್ರಯ ಮಂತ್ರ ಜಪಿಸಿ ಸೋಮಧರನು ತಾನು
ಆ ಮಹಾ ಹಲಾಹಲವನು ನೇಮದಿಂದ ಜಯಿಸಿರುವನು
ಕಾಮಚಾರ ಕುಮತಿ ಮನುಜರಾ ಮಾಯಾದಿಗಳನು
ಶ್ರೀಮಹೀಶ ಸಿಂಧುವಾಸ ನೀ ಮನ್ನಿಸಲು ನಿಲುವದೇನು 1
ನಗಧರ ನಿನ್ನಂಘ್ರಿಕಮಲಯುಗಳ ಒಂದೆ ಸಾಕು ಎನಗೆ
ತ್ರಿಗುಣ ವಿಷಯವಾದ ಸರ್ವ ನಿಗಮಕರ್ಮವ್ಯಾಕೊ
ಅಗಣಿತಾತ್ಮ ಅಮೃತಾಂಧಸರ ಮಗುವಿನಂತೆ ಪೊರೆವಿ
ನಗುತಲೆನ್ನ ನೀ ಕಾಯ್ದದಕೆ ಪೊಗಳಲು ನಾ ಶಕ್ತನಹುದೆ 2
ಪೋರ ಕೆಟ್ಟುಹೋದನೆಂದು ಊರಜನರು ನುಡಿದಾ
ಕ್ರೂರ ಮಾತ ಕೇಳಿ ತಾಳಲಾರದೆ ನಾ ಬಂದು
ವಾರಿಜಾಕ್ಷ ನಿನ್ನ ಪದಕೆ ದೂರ ಪೇಳಲಂದು
ಶ್ರೀರಮಣಿಯ ಸಹಿತಲೆನಗಾಧಾರವಾದಿ ದೀನಬಂಧು 3
ಇಂದ್ರಿಯಂಗಳೆನ್ನ ವಿಷಯಬಂಧದಿಂದ ಬಿಡಲು
ಒಂದು ಕರ್ಮದಲು ಸಾಂಗದಿಂದಲೆನಗೆ ನಿಲಲು
ಇಂದಿರೇಶ ಈ ಕಾರಣದಿ ಕುಂದಮನಕೆ ತಾರದಿರೊ
ತಂದೆ ನೀನೆ ಶರಣನೆಂದು ಹೊಂದಿರುವದನೆಣಿಸಿ ಸಲಹೊ 4
ನಾಮಸ್ಮರಣವಿತ್ತು ಕಾಯಿ ಕಾಮಿತಾರ್ಥದಾಯಿ
ನೇಮ ಒಂದು ನಡೆಸದಂಥ ಪಾಮರನಾಗಿಹೆನು
ಸೋಮಧರನ ಶುದ್ಧಿಕರಿಸ ಭೂಮಿತೀರ್ಥ ಜನಕರಾಮಕೃಷ್ಣ ವೇದವ್ಯಾಸ ಸ್ವಾಮಿ ಶ್ರೀನಿವಾಸ 5