ನಾನಾ ಚಿಂತನೆ ಎನಗಿಲ್ಲ ಹರಿ
ನಿನ್ನ ಚಿಂತನೆ ಎನಗನುಗಾಲ ಪ
ಮಾನಾಪಮಾನದ ಭಯವಿಲ್ಲೆನಗೆ ತವ
ಧ್ಯಾನವೊಂದೆ ನೀಡು ಬಹು ಮಿಗಿಲ ಅ.ಪ
ಉಪವಾಸಬಿದ್ದರೆ ಆಡ್ಡಿಯಿಲ್ಲ ಎನ
ಗಪರೂಪ ಊಟಾದರ್ಹಿಗ್ಗಿಲ್ಲ
ಕಪಟದಿ ಬೈದರೆ ಅಹಿತಿಲ್ಲ ಜನ
ನಿಪುಣನೆಂದರೆ ಎನಗ್ಹಿತವಿಲ್ಲ
ಸುಪಥದಿ ನಡೆಸೆನ್ನ ಸಫಲನೆನಿಸಿ ನಿಮ್ಮ
ಗುಪಿತ ಮಂತ್ರ ಮಾಡನುಕೂಲ 1
ಪರಮ ಬಡತನವಿರೆ ಪರವಿಲ್ಲ ಬಲು
ಸಿರಿ ಸಂಪದವಿರೆ ಹರುಷಿಲ್ಲ
ಸಿರಿವರ ನಿಮ್ಮಯ ಚರಣ ಸ್ಮರಣೆವೊಂದೆ
ಸ್ಥಿರಮಾಡು ಮರೀದಂತೆ ಗೋಪಾಲ 2
ಕಾಮಿನಿಯರ ಪ್ರೇಮ ನಿಜವಿಲ್ಲ ಮತ್ತು
ಹೇಮ ಮುತ್ತು ರತ್ನ ಇರೋದಲ್ಲ
ಭೂಮಿಸೀಮೆಯ ಸುಖವಿಲ್ಲ ಇದು
ನೇಮವಲ್ಲೊಂದಿನ ಬಟ್ಟಬೈಲ
ಕ್ಷೇಮಮಂದಿರ ಭಕ್ರಪ್ರೇಮದಿ ಕೊಡು ಶ್ರೀರಾಮ ನಿಮ್ಮಡಿ ಭಕ್ತಿ ನುತಪಾಲ 3