ವಾಸುದೇವನನಾ ಶ್ರೈಸದಿಹ ಉಪಾಸನ್ಯಾತಕೆ
ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ ಧ್ರುವ
ಹೃದಯ ಶುದ್ಧವಾಗದೆ ಉದಯಸ್ನಾನವ್ಯಾತಕೆ
ಬದಿಯಲೀಹ್ಯ ವಸ್ತುಗಾಣದ ಜ್ಞಾನವ್ಯಾತಕೆ
ಉದರ ಕುದಿಯು ಶಾಂತ ಹೊಂದದ ಸಾಧನ್ಯಾತಕೆ
ಬುಧರ ಸೇವೆಗೊದಗದೀಹ ಸ್ವಧನವ್ಯಾತಕೆ 1
ಭಾವ ನೆಲಿಯುಗೊಳ್ಳ ದೀಹ್ಯ ಭಕುತಿದ್ಯಾತಕೆ
ಕಾವನಯ್ಯನ ಕಾಣದೀಹ್ಯ ಯುಕತದ್ಯಾತಕೆ
ದೇವದೇವನ ಸೇವೆಗಲ್ಲದ ಶಕುತ್ಯದ್ಯಾತಕೆ
ಹ್ಯಾವ ಹೆಮ್ಮೆ ಅಳಿಯದೀಹ್ಯ ವಿರುಕಿತ್ಯಾತಕೆ 2
ತತ್ವ ತಿಳಿಯದಿಹದೀ ವಿದ್ವತ್ವವ್ಯಾತಕೆ
ಸತ್ವಗುಣದ ಲಾಚರಿಸದಿಹ್ಯ ಕವಿತ್ಯವ್ಯಾತಕೆ
ಚಿತ್ತಶುದ್ಧವಾಗದಿಹ ಮಹತ್ವವ್ಯಾತಕೆ
ವಿತ್ತ ಆಶೆಯು ಅಳಿಯದಿಹ ಸಿದ್ಧತ್ವವ್ಯಾತಕೆ 3
ನೀತಿಮಾರ್ಗವರಿಯದೀ ಹ ರೀತ್ಯದ್ಯಾತಕೆ
ಮಾತುಮಿತಿಗಳಿಲ್ಲದವನು ಧಾತುವ್ಯಾತಕೆ
ಅಮೃತ ಊಟವ್ಯಾತಕೆ
ಜ್ಯೋತಿ ತನ್ನೊಳರಿಯದಲೆ ಉತ್ತಮದ್ಯಾತಕೆ 4
ನಿತ್ಯ ಶ್ರವಣವ್ಯಾತಕೆ
ನೆನವು ನೆಲೆಯಾಗೊಳ್ಳದಿಹ ಮನನವ್ಯಾತಕೆ
ತನುವಿನಲ್ಲಿ ಘನವು ಕಾಣದನುಭವ್ಯಾತಕೆ
ದೀನಮಹಿಪತಿಸ್ವಾಮಿಗಾಣದ ಜನಮವ್ಯಾತಕೆ 5