ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಭೀಮಸೇನ ಪ್ರಾರ್ಥನೆ) ಭೀಮಸೇನ ಸಕಲಸತ್ವಧಾಮ ರಕ್ಷಿಸೆನ್ನ ಬೇಗ ಸಾಮಗಾನ ಲೋಲ ಕೃಷ್ಣ ಪ್ರೇಮರಸಕೆ ಪಾತ್ರನಾದ ಪ. ಮಂಗಲಾಚರಿತ್ರ ನಿನ್ನ ಅಂಗಸಂಗದಿಂದ ಬಹು ತುಂಗ ಗಿರಿಯು ಒಡೆದು ಶತಶೃಂಗವೆನಿಸಿತು ಅಂಗುಲಿ ಪ್ರಹಾರದಿಂದ ಶಿಂಗತತಿಗಳನ್ನು ಬಹಳ ಭಂಗಬಡಿಸಿ ಬಾಲಲೀಲ ರಂಗದಲ್ಲಿ ಬಲುಹ ತೋರ್ಪ 1 ಹಸಿದ ವೇಳೆಯಲ್ಲಿ ಮೆದ್ದ ವಿಷದ ಭಕ್ಷ್ಯ ಜೀರ್ಣಗೊಳಿಸಿ ಉಶನ ಮಂತ್ರದಿಂದ ಹಲ್ಲ ಮಸೆಯುತಾ ಬಂದ ಅಸುರ ವೇಶದಷ್ಟಾಕ್ಷಿಗಳ ಮಶಕದಂತೆ ಬಡಿದು ಕೆಡಹಿ ಕುಶಲದಿಂದ ನಿದ್ರೆಗೈದ ಅಸಮಶಕ್ತಿ ಪೂರ್ಣಮೂರ್ತಿ 2 ನಗಗಳ ಮೇಲೇರುತ್ತ ಹಣ್ಣುಗಳನೊಂದೊಂದಾಗಿ ಕರದಿ ತೆಗೆದು ತಿಂಬ ಕೌರವರನು ನಗುತ ನೋಡುತಾ ನೆಗೆದು ಬೀಳ್ವ ತೆರದಿ ತರುಮೂಲಗಳಾ ತುಳಿದು ಕೆಡಹಿ ದೇವಾ- ಕೊಂಡ 3 ಗೂಗೆಯಂತೆ ನಿನ್ನ ಬಳಿಗೆ ಸಾಗಿ ಬಂದು ಶಕುನಿಮುಖರು ಯೋಗನಿದ್ರೆ ತಿಳಿಯದೆ ಚೆನ್ನಾಗಿ ಬಂಧಿಸಿ ಭಾಗೀರಥಿಯ ಜಲದಿ ದೂಡೆ ವೇಗದಿ ಪಾತಾಳವೈದಿ ನಾಗಕನ್ಯೆರಿತ್ತ ರಸವ ಬೇಗ ಸವಿದು ತಿರುಗಿ ಬಂದ 4 ದುರುಳರಿಂದ ರಚಿತವಾದ ಅರಗಿನ ಮನೆಗೆ ಹೋಗಿ ಕಾಲ ನಿರುತಕಿನಿಸಿಲಿ ಇರುಳಿನಲ್ಲಿ ತಾನೆ ಅಗ್ನಿ ಇರಿಸಿ ಬೇಗಲೆದ್ದು ಸಹೋ ದರರನೆತ್ತಿ ಬಹು ಯೋಜನಕೆ ಸರಿದು ಪೋದ ಶಕ್ತರರಸ 5 ಡೊಂಬಿಮಾಳ್ಪನೆಂದು ಬಹಳ ಡಂಬರದಿಂದಿದಿರಾ ಹಿ- ಕದಂಬ ವೈರಿಯ ಅಂಬರದೊಳಗೈದಿ ವಜ್ರಕಂಬದಂತೆ ಹೊಳವ ಬಹು ಸ್ತಂಭದಿಂದ ಕೆಡಹುತ ಹೈಡಿಂಬನೆಂಬ ಮಗುವ ಪಡೆದ 6 ನಗರ ದೊಳ್ವೈದಿಕರಂತೆ ವಾಸವಾಗಿ ಪೋಕ ಬಕನ ಬಾಧೆಯಿಂದ ಶೋಕಗೊಳುವರ ಸಾಕುವೆನೆಂದೆದ್ದು ನಾನಾ ಶಾಖ ಭಕ್ಷಾನ್ನಗಳ ತಾನೆ ಸ್ವೀಕರಗೊಂಡಸುರನನ್ನು ಸೋಕಿ ಸೀಳಿ ಬಿಸುಟ ದೊರೆಯೆ 7 ವಿಪ್ರ ವೇಷದಿಂದ ದ್ರುಪದಸುತೆಯನೊಲಿಸಿ ಕೃದ್ಧ ನೃಪರ ಗೆದ್ದು ರುಕ್ಮಿಣೀಶ ಕೃಪೆಯಾ ಬಲಕೊಂಡು ಅಪರಿಗಣ್ಯ ಪೌರುಷಕಿಂನುಪಮೆಯಿಲ್ಲವೆಂದು ಸರ್ವ ಖಪತಿವರರು ಪೊಗಳುತಿರಲು ತ್ರಿಪುರವೈರಿಯಂತೆ ಮೆರೆದ 8 ಅಂಧ ನೃಪನ ಮಾತ ಕೇಳಿ ಇಂದ್ರಪ್ರಸ್ಥ ಪುರಕೆ ರಾಜ ನೆಂದು ನಿಂದು ಮಗಧಾದಿಗಳ ನೊಂದೆ ನಿಮಿಷದಿ ಕೊಂದು ರಾಜಸೂಯಮೇಧದಿಂದ ಸಕಲಯಜ್ಞೇಶಗೋ- ಕೊಂಡ 9 ದ್ಯೂತ ನೆವದಿ ಸಕಲ ರಾಜ್ಯ ಸೋತು ವನಕೆ ಪೋಗಿ ಲಕ್ಷ್ಮೀ- ನಾಥ ಕರುಣ ಬಲದಿಂದ ಸುರವ್ರಾತವಡಗಿಸಿ ಭೂತನಾಥನೋರದಿ ಬಹಳ ಖ್ಯಾತ ಕೀಚಕಾದಿಗಳನು ಘಾತಿಸಿ ಗಂಧರ್ವನೆಂದಜ್ಞಾತವಾಸ ಕಳದ ಧೀರ 10 ದುರುಳ ಕೌರವರನು ಗದೆಯ ತಿರುಹಿ ಕೆಡಹಿ ಧರಣಿಭರವ ಸುರಪಸೂನು ಸಹಿತಲ್ಲಿಳುಹಿ ಪರಮ ಹರುಷದಿ ಹರಿಯ ನೇಮದಿಂದ ನಾಗಪುರವನಾಳಿ ವಿಷ್ಣುಭಕ್ತಿ ಸುಜನ ತತಿಯ ಪೊರೆದು ಪದ್ಮಜಾತನಾಹ11 ದುಷ್ಟವೈರಿ ಜನರ ಗೆದ್ದು ಅಷ್ಟ ಭಾಗ್ಯ ಸಹಿತ ದೇಹ ಪುಷ್ಟಿ ಜ್ಞಾನ ದೃಷ್ಟಿಗಳನು ಕೊಟ್ಟು ಕರುಣಿಪಾ ಸೃಷ್ಟಿಗೊಡೆಯ ಸರ್ಪರಾಜ ಬೆಟ್ಟದಲ್ಲಿ ನಿಂದು ಭಕ್ತ- ಭೀಷ್ಟವರದನೊಲಿಪ ತೆರದಿ ಸುಷ್ಠುಪ್ರೇಮವಿಟ್ಟು ಕಾಯೊ 12
--------------
ತುಪಾಕಿ ವೆಂಕಟರಮಣಾಚಾರ್ಯ
(ಮದ್ರಾಸಿನ ತಿರ್ವಳಕೇಣಿ ಪಾರ್ಥಸಾರಥಿ) ಏನು ಮಾಡಲಿನ್ನು ನೀನಲ್ಲದೆ ಯಾದಾರ ಬೇಡಲಿನ್ನು ಪ. ಮಾನಿನಿ ದ್ರೌಪದಿ ಮೊರೆಯಿಡುವುದ ಕೇಳಿ ಸಾರಥಿ ದೇವ ಅ.ಪ. ನೀನಿತ್ತ ಸೌಭಾಗ್ಯದ ಗರ್ವದಿ ಎನ್ನ ಧ್ಯಾನಾದಿಗಳ ಮಾಡದೆ ನಾನಾ ವಿಧದ ದುರ್ಮಾನುವಾದುದರಿಂದ ನೀನೆ ಸದ್ಗತಿಯೆಂದು ಧ್ಯಾನಿಸಿಲ್ಲಿಗೆ ಬಂದೆ 1 ಬಡತನದಿಂದಿರಲು ಸಕಲ ಸುರ- ರೊಡೆಯ ನೀ ಕೈ ಪಿಡಿದು ರೂಢಿ ಮದದಿ ನಿನ್ನನು ಬಿಟ್ಟು ಕಡೆಗೆ ನಿನ್ನಯ ಪಾದದೆಡೆಗೆ ಬಂದೆನು ದೇವ 2 ಪಶ್ಚಿಮ ವಾರಿಧಿಯ ತೀರದಲಾದ ದುಶ್ಚರಿತ್ರೆಯ ತಾಳದೆ ಆಶ್ಚರ್ಯತಮವಾದ ಸಚ್ಚರಿತ್ರನೆ ನಿನ್ನ ನೆಚ್ಚಿ ಬಂದಿಹೆನೊ ವಿಪಶ್ಚಿತರೊಡೆಯನೆ 3 ನಕ್ಷತ್ರಗಳಂದಿಂದಲು ಯೆನ್ನಪರಾಧ- ವಕ್ಷಯವಾಗಿರಲು ಅಕ್ಷರಿ ವಂದ್ಯ ನೀ ಲಕ್ಷ ಬಿಡುವುದೆ ಕ- ಟಾಕ್ಷದಿಂದಲಿ ನೋಡಿ ರಕ್ಷಿಸು ಕರುಣದಿ 4 ಎಷ್ಟು ಕರ್ಮಿಯಾದರು ನಿನ್ನಲಿ ಮನ- ವಿಟ್ಟು ಬಂದಿರುವೆನಲ್ಲ ದುಷ್ಟಮರ್ದನ ಶಿಷ್ಟರಕ್ಷಣ ಭಾಜಕ ಜ- ನೇಷ್ಟದಾಯಕ ಸೃಷ್ಟ್ಯಾದೃಷ್ಟಕರ್ತ 5 ನಟನ ಮಾಡುವ ಬೊಂಬೆಯ ಪೋಲುವ ಯೆನ್ನ ಹಟದಿಂದ ದಣಿಸುವುದೆ ವಟಪತ್ರ ಶಾಯಿ ಧೂರ್ಜಟಿ ವಂದ್ಯ ಅಂಜಲಿ ಪುಟನಾಗಿ ಬೇಡುವೆ ಘಟಿಸೊಭಿಲಷಿತವ 6 ಎಂದಿಗಾದರು ನಿನ್ನಯ ಪಾದಯುಗಾರ- ವಿಂದ ದರ್ಶನವಾಗಲು ಭವ ಸಿಂಧುವ ದಾಟುವೆ- ನೆಂದು ಬಂದಿರುವೆ ಸನಂದನಾದಿ ವಂದ್ಯ 7 ಕೂರ್ಮ ವರಾಹ ನಾರಸಿಂಹ ವಾಮನ ಶ್ರೀ ಭಾರ್ಗವ ರಾಮಕೃಷ್ಣ ಬೌದ್ಧ ಕಲ್ಕಿಯಂಬ ದಿವ್ಯ ನಾಮಗಳನು ಬಿಟ್ಟು ಕಾಮಲಾಲಸನಾಗಿ 8 ಒಂದು ನಿಮಿಷವಾದರು ತತ್ವಾಧಾರ ವಿಂದ ದರ್ಶನ ಮಾಡಲು ಹೊಂದಿದಘಗಳೆಲ್ಲ ಬೆಂದು ಹೋಗುವುದೆಂದಾ- ನಂದತೀರ್ಥಚಾರ್ಯರೆಂದ ನುಡಿಯ ನಂಬಿ 9 ದ್ವೇಷಿ ಮಾನವರ ಮುಂದೆ ನಾನಾ ವಿಧ ಕ್ಲೇಶವ ತಾಳ್ದೆ ಹಿಂದೆ ಘಾಸಿಯಾಗಿ ನಾನಾ ದೇಶ ದಾಟಿ ಬಂದೆ ಮೀಸಲಾದೆ ನಿನ್ನ ದಾಸ ದಾಸ್ಯನೆಂದೆ 10 ಜನರೊಳು ಪ್ರಮಿತನಾಗಿ ಬಾಳಿದ ಮಾನ- ವನು ಮಾನಹೀನನಾಗಿ ತನುವ ಪೊರೆದನತಿ ಘನಕ್ಲೇಶವೆನುತ ಅ- ರ್ಜುನನಿಗೆ ಉಪದೇಶವನು ಪೇಳಿದವ ನೀನೆ 11 ಯುಕ್ತಿ ಒಂದನು ಕಾಣೆನು ದೇಹದಿ ದೃಢ ಶಕ್ತಿಯಿಲ್ಲದವ ನಾನು ಮುಕ್ತಾಶ್ರಯ ಸರ್ವ ಶಕ್ತಿ ನೀನಿಹ ಪರ- ಭುಕ್ತಿ ಮುಕ್ತಿದನೆಂಬ ವಿರಕ್ತಿಯಿಂದಲಿ ಬಂದೆ 12 ಕಾಸೆಲ್ಲ ವ್ಯಯವಾಯಿತು ಎನಗೆ ಪರದೇಶವಾಸವಾಯಿತು ಆಸೆ ಬಿಡದುದರ ಘೋಷಣೆಗಿನ್ನವ- ಕಾಶವೊಂದನು ಕಾಣೆ ಶ್ರೀಶ ನೀನರಿಯೆಯ 13 ನಿಲ್ಲಲಾಶ್ರಯವನು ಕಾಣೆ ಪೋಗುವೆನೆಂದ- ರೆಲ್ಯು ಮಾರ್ಗವನು ಕಾಣೆ ಬಲ್ಲಿದ ವೈರಿಗಳಲ್ಲಿ ತುಂಬಿಹರರಿ- ದಲ್ಲಣ ನೀ ಎನ್ನ ಸೊಲ್ಲ ಲಾಲಿಸು ಕೃಷ್ಣ 14 ಅಶನವಸನ ಕಾಣದೆ ದೇಶವ ಸುತ್ತಿ ಬಸಿದು ಬೆಂಡಾಗಿಹೆನು ಉಶನಾಂiÀರ್i ಶಿಷ್ಯನ ವಶದಿಂದೆತ್ತಿ ಪೃಥ್ವಿಯ ದಶನಾಯಕರಿಗಿತ್ತ ಅಸಮಸಾಹಸ ದೇವ 15 ಮಾಡಿದಪರಾಧಕೆ ಮಾನಹಾನಿ ಮಾಡಿದುದು ಸಾಲದೆ ಬೇಡುವೆ ದೈನ್ಯದಿ ಪಾಡುವೆ ಮಹಿಮೆಯ ರೂಢಿಯೊಳಗೆ ದಯಮಾಡು ಇನ್ನಾದರು 16 ಇನ್ನಾದರೂ ಮನದಿ ಪಶ್ಚಾತ್ತಾಪ ವನ್ನು ತಾಳೊ ದಯದಿ ಕಣ್ಣ ಕಟ್ಟಿ ಕಾಡಿನೊಳು ಬಿಟ್ಟ ತೆರದೊಳಿಂ- ತೆನ್ನನು ಬಳಲಿಪದನ್ಯಾಯವಲ್ಲವೆ 17 ನಷ್ಟವೇನಹುಣನು ಎನ್ನಲಿ ಕ್ರೋಧ ಬಿಟ್ಟು ಬಾಧಿಸುತ್ತಿರಲು ಕೃಷ್ಣ ನೀ ಕರುಣದಿ ಕಷ್ಟ ಬಿಡಿಸಿ ಕಡೆ ಗಿಷ್ಟು ತಾತ್ಸಾರದಿಂದ ಕಷ್ಟಗೊಳಿಸಿದೆ 18 ಇಂದ್ರಾದಿ ಸುರರುಗಳು ಕೆಲವು ಕಾಲ ನೊಂದು ಭಾಗ್ಯವ ಪಡದು ಇಂದಿರೇಶ ನಿನ್ನ ಬಂಧಕ ಶಕ್ತಿಯಾ ನಂದ ತಿಳಿದಂತೆ ಮಂದನಾನರಿವೆನೆ 19 ಆನೆಯ ಭಾರವನು ಹೊರಲು ಸಣ್ಣ ಶ್ವಾನ ಸಹಿಸಲಾಪದೆ ದೀನ ಮಾನವನೆಂದು ಧ್ಯಾನಿಸಿ ಮನದಲಿ ಘನ್ನ ದುಖ್ಖವ ಕಳೆಯಾನಂಥ ಮೂರುತಿ20 ನೀನಿತ್ತ ಮಾನವನು ನೀ ಕಳದುದ ಕಾನು ಮಾಡುವದೇನಯ್ಯ ದಾನವಾರಿ ಸುರಧೇನು ನಿನ್ಡಿಗಳ ಧ್ಯಾನ ಮಾಡುತಲಿ ಸುಮ್ಮಾನದಿಂದಿರುವೆನು 21 ಸಾಕು ಸಾಕು ಮಾಡಿದೆ ಎನ್ನನು ಬಹು ನೀಕರಿಸುತ ದೂಡಿದೆ ಬೇಕಾದರೆ ಭಕ್ತ ನೀ ಕಪಾಲನ ಪ- ರಾಕೆಂಬ ಬಿರುದಿಂದ ಸಾಕುವದುಚಿತವೆ 22 ಅಂಬರೀಷವರದ ಸ್ವಭಕ್ತ ಕು- ಟುಂಬಿಯಂಬ ಬಿರುದ ನಂಬಿದ ಮೇಲೆನಗಿಂಬುದೋರದೆ ವೃಥಾ ಡಂಬರವ್ಯಾಕಿನ್ನು ಶಂಬರಾರಿಯ ಪಿತ 23 ಹಂಸವಾಹನ ಜನಕ ದಾಸಮದ- ಭ್ರಂಶಕನೆಂದನ- ಕ ಸಂಶಯವಿಲ್ಲದೆ ತಿಳಿದೆನು ಮಾತುಳ ಕಂಸ ಮರ್ದನ ವಿಪಾಂಸ ಶೋಭಿತ ದೇವ 24 ತರಳ ಪ್ರಹ್ಲಾದ ಧ್ರುವಾದಿಗಳನೆಲ್ಲ ಪೊರೆದನೆಂಬ ಕಥೆಯ ಹಿರಿಯರು ಪೇಳ್ವರು ಭರವಸೆ ಎನಗಿಲ್ಲ ಸಿರಿನಲ್ಲ ನೀಯೆನ್ನ ಬರಿದೆ ಬಿಟ್ಟದ ಕಂಡು25 ವಿಜಯಸಾರಥಿ ನಿನ್ನಯ ಮೂರ್ತಿಯ ಕಂಡು ಭಜಿಸಿದ ಮೇಲೆನ್ನನು ವಿಜಯ ಪೊಂದಿಸದಿರೆ ತ್ರಿಜಗವು ನಗದೇನೊ ಭುಜಗ ಭೂಷಣ ವಂದ್ಯ ದ್ವಿಜರಾಜ ಗಮನನೆ 26 ಕುಂದಣ ವರ್ಣವಾದ ಕೇತಕಿಯನು ಗಂಧಕೆ ಮರುಳನಾಗಿ ಬಂದು ಕುಸುಮಧೂಳಿಯಿಂದ ಲಂಡನಾದ ತುಂದಿಲೋದರ ಮಿಳಿಂದನಂದದಿ ಸಿಕ್ಕಿ 27 ಬೇಡುವದೇನೆಂದರೆ ನಿನ್ನನು ಧ್ಯಾನ ಮಾಡಿ ಪಾಡುವ ಭಾಗ್ಯವ ನೀಡು ನೀಚರನೆಂದು ಬೇಡದಂದದಿ ಮಾಡು ರೂಢಿಯೊಳಗೆ ದಯಮಾಡು ನೀ ನಿರುಪದಿ 28 ಇನ್ನು ತಾ ತಾಳಲಾರೆ ಕ್ಷಣೆ ಕ್ಷಣೆ ನಿನ್ನ ಪೊಗಳಲಾರೆ ಪನ್ನಗಾಚಲವಾಸ ಪರಮ ಪುರುಷ ಪ್ರ- ಸನ್ನ ವೆಂಕಟೇಶ ಪಾಲಿಸು ಕೃಪೆಯಿಂದ 29
--------------
ತುಪಾಕಿ ವೆಂಕಟರಮಣಾಚಾರ್ಯ