ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೊಲ್ಲು ಕೇಳುತ ಈಗ ಮೆಲ್ಲನೆ ಎನ್ನ ಮನದಲ್ಲಿ ನಿಲ್ಲೊ ಪ. ಪುಲ್ಲಲೋಚನ ದೇವ ಎಲ್ಲಿಗು ಪೋಗದೆ ಉಲ್ಲಾಸಪಡಿಸುತ ನಿಲ್ಲೊ ಹೃದಯದಲಿ ಅ.ಪ. ಸ್ಥಾವರ ಜಂಗಮ ವ್ಯಾಪ್ತನಾಗಿಹ ದೇವ ದೇವ ಎನ್ನ ಮನದಿ ನಿಲುವುದು ಘನವೆ ಶ್ರೀವರ ನೀನೀಗ ಕಾವನೆಂದರಿತಿರೆ ಸಾವಕಾಶವಿದೇಕೆ ಭಾವಜನಯ್ಯನೆ 1 ಇಷ್ಟು ದಿನವು ನಿನ್ನ ಮುಟ್ಟಿ ಪೂಜಿಸಲಿಲ್ಲ ಸಿಟ್ಟೇನೊ ನಿನಗಿದರ ಗುಟ್ಟು ತಿಳಿಯದೆ ಬಿಂಕ ಕೊಟ್ಟು ಅಭಯ ಸಲಹೊ ಇಷ್ಟ ಸ್ಥಾನದಿ ನಿನ್ನ ಮುಟ್ಟಿ ಪೂಜಿಸಿರುವೆ 2 ಸರಿಯಲ್ಲ ನಿನಗಿದು ಕರೆದರೆ ಭಕ್ತರು ತ್ವರಿತದಿಂದಲಿ ಬರುವ ಬಿರುದಿಲ್ಲೆ ನನಗೆ ಸರಿ ಬಂದರೆ ಬಾರೊ ಬಾರದಿದ್ದರೆ ಬಿಡೊ ಅರಿತು ನಿನ್ನಯ ನಾಮ ಅರುಹುವ ಮತಿ ನೀಡೊ 3 ಕಾರ್ಯಕಾರಣಕರ್ತ ಪ್ರೇರ್ಯಪ್ರೇರಕರೂಪ ಉರ್ವಿಗೊಡೆಯ ಸರ್ವ ನಿರ್ವಾಹಕ ಗರ್ವರಹಿತಳ ಮಾಡಿ ಸರ್ವದಾ ಪೊರೆದರೆ ಸರ್ವಾಧಿಪತಿಯೆಂದು ಸಾರ್ವೆನೊ ನಾನಿಂದು 4 ಸೃಷ್ಟಿ ಸ್ಥಿತಿ ಲಯಗಳಿಗೆ ಕರ್ತನೊಬ್ಬನೆ ನೀನು ಶ್ರೇಷ್ಠನಾಗಿರುವೆಯಾ ಸರ್ವರಿಗೆ ಬಿಟ್ಟಿರುವೆಯೊ ಜಗದ ಅಷ್ಟೂ ವಸ್ತುಗಳಿಂದ ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲದೇವ 5
--------------
ಅಂಬಾಬಾಯಿ