ಸಂಸಾರ ಸುಖವಿಲ್ಲ ನಾ ಹಿಂಸೆಯ ತಾಳಲಾರೆ ಪ
ಮಾತೆಯ ಮಾಂಸದ ಹೇಸಿಗೆ ಕೋಶದೊಳ್
ಮಾಸ ಒಂಭತ್ತನು ಕ್ಲೇಶದಿಂದ ತಳ್ಳಿದೆ
ಈಶ ಲಕ್ಷ್ಮೀಶನು ಕೋಪದಿಂದ ಬೀಸಲು
ಕೂಸಾಗಿ ಭೂಮಿಗೆ ವಾಸಕ್ಕೆ ಬಂದೆನು 1
ನಡೆ ನುಡಿಯ ಕಲಿಯುತಲಿ ಹರುಷದಲಿ ಕುಣಿಯುತಲಿ
ಹುಡುಗತನ ಕಳೆಯುತಿರೆ ಹರುಷಗಳು ತೊಲಗಿದವು
ದುಡಿಕಿನಲಿ ಭ್ರಮಿಸಿದೆನು ಮಡದಿಯಳ ಸಡಗರಕೆ
ಭವ ಕಡಲೊಳಗೆ ಮುಳುಗಿ 2
ಕಡುಬಡತನ ಕೊರೆಯುತಲಿದೆ ಕಿರಿಕಿರಿಗಳು ಉರಿಸುತಲಿವೆ
ತನುಮನಗಳು ಜರಿಯುತಲಿವೆ ಅಣಕಿಸುವರು ನಿಜ ಜನಗಳು
ಪರಮ ಪುರುಷ ಸಿರಿಯರಸನೆ
ಮರೆಯದಿರುವೆ ಉಪಕೃತಿಗಳ ದಡಕೆಳೆಯೊ ಪ್ರಸನ್ನ ಹರೇ 3