ಚೋದ್ಯ ಚೋದ್ಯ ಹರಿ ನಿನ್ನ ಆಟ
ಸುಲಭವಲ್ಲಾರಿಗೆ ತಿಳಿಯದೀ ಮಾಟ ಪ
ಉಣಿಸುವವರೊಳು ನೀನೆ ಉಣುತಿರುವವರಲಿ ನೀನೆ
ಉಣಿಸುಣಿಸಿ ಅಣಕಿಸುವ ಬಿನುಗರಲಿ ನೀನೆ
ಮಣಿಯುವವರೊಳು ನೀನೆ ಮಣಿಸಿಕೊಂಬರಲಿ ನೀನೆ
ಕ್ಷಣಕ್ಷಣಕೆ ಬದಲ್ವಾಗ ಬಣ್ಣಕಗರಲಿ ನೀನೆ 1
ಹೊಡೆಯುವವರಲಿ ನೀನೆ ಹೊಡೆಸುವವರಲ್ಲಿ ನೀನೆ
ಹೊಡೆಸಿಕೊಳ್ವರಲಿ ನೀನೆ ಬಿಡಿಸುವವರಲಿ ನೀನೆ
ದುಡಿಯುವವರಲಿ ನೀನೆ ದುಡಿಸಿ ಕೊಂಬರಲಿ ನೀನೆ
ಬಡವರಲಿ ನೀನೆ ಬಲ್ಲಿದರೊಳ್ನೀನೆ 2
ಕೊಟ್ಟೊಡೆಯರಲಿ ನೀನೆ ಬಿಟ್ಟೋಡ್ವರಲಿ ನೀನೆ
ಕೊಟ್ವೊವಚನತಪ್ಪುವ ಭ್ರಷ್ಟರಲಿ ನೀನೆ
ಶಿಷ್ಟನಿಷ್ಟರಲಿ ನೀನೆ ಬಿಟ್ಟಾಡ್ವರಲಿ ನೀನೆ
ಇಟ್ಟಿಟ್ಟು ಹಂಗಿಸುವ ದುಷ್ಟರಲಿ ನೀನೆ 3
ಪಾಪಿಷ್ಟರಲಿ ನೀನೆ ಕೋಪಿಷ್ಟರಲಿ ನೀನೆ
ಶಾಪಿಸುವರಲಿ ನೀನೆ ಶಾಪಕೊಂಬರಲಿ ನೀನೆ
ತಾಪತ್ರದಲಿ ನೀನೆ ಭೂಪತಿಗಳೊಳು ನೀನೆ
ಅಪಾರ ಸೃಷ್ಟಿ ಸರ್ವವ್ಯಾಪಕನು ನೀನೆ 4
ಇನ್ನರಿದು ನೋಡಲು ಅನ್ಯವೊಂದಿಲ್ಲವು
ನಿನ್ನಪ್ರಭೆಯೆ ಸಕಲ ಜಗವನ್ನು ಬೆಳಗುವುದು
ನಿನ್ನ ರೂಪವೆ ಜಗ ಎನ್ನಯ್ಯ ಶ್ರೀರಾಮ
ಭಿನ್ನಬೇದ ಬಿಡಿಸೆನ್ನ ಧನ್ಯನೆನಿಸಯ್ಯ 5