ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಧ್ವಾಂತರ್ಯಾಮಿ ಶ್ರೀ ಗುರು ಬಿಂಬ ಕಾಯೊ ಪ. ಹೃದ್ವನಜದಲಿ ನೆಲಸಿ ಆಜ್ಞಾನ ಹರಿಸಿ ಅ. ಸಾಟಿ ರಹಿತನೆ ನಿನ್ನ ಮುಖ ದರ್ಶನಾ ಹಾಟಕೋದರ ಮುಖರು ಅರಿಯದಂತವನನ್ನು ಕೋಟಲೆಯಭವ ಜನರು ಅರಿವದೆಂತಯ್ಯಾ 1 ತ್ರಿವಿಧ ಜೀವರ ತೆಗೆದು ಜನ್ಮದಲಿ ತೊಡಕಿಸೀ ಕರ್ಮ ಬಲೆ ಬೀಸಿ ಪವನನೈಯ್ಯನೆ ನಿನ್ನ ಮಾಯ ಮೋಡವ ಕವಿಸಿ ಭವಣಪಡಿಸಲು ಇನ್ನು ಬಿಡುಗಡೆಯದೆಂತೋ 2 ನೀನಾಗೆ ವಲಿದು ನಿನ್ನ ಭಕ್ತರನು ಕಾಯುತಿಯೊ ಮಾನಾಭಿಮಾನದೊಡೆಯನೆ ಆರ್ತಪಾಲ ಗಾನಲೋಲನೆ ನಿನ್ನ ಧ್ಯಾನ ಮೌನವನಿತ್ತು ಮಾನಸದಿ ನಿನ್ನ ತೋರೊ ದೀನ ರಕ್ಷಕನೇ3 ಅಂಗುಟದಿ ಗಂಗೆಯನು ಪೆತ್ತ ಪಾವನಪಾದ ಶೃಂಗಾರ ವಸನ ವಡ್ಯಾಣ್ಯನಡುವೂ ಅಂಗನೆಯು ವಕ್ಷದಲಿ ಹಾರಪದಕಗಳುಲಿಯೆ ಉಂಗುರದ ಬೆರಳು ಕಂಕಣ ಕಡಗ ಪಾಣೀ 4 ಕರ್ಣಕುಂಡಲ ಕಾಂತಿ ಮುಗುಳುನಗೆ ಕುಡಿನೋಟ ರನ್ನ ತಿಲಕದ ಫಣಿಯ ಮುಂಗುರುಳ ಸೊಬಗೊ ಸ್ವರ್ಣಕಾಂತಿಯ ತೇಜ ಕಡಗೋಲ ಕೈ ಸೊಬಗು ಚನ್ನಗೊಪಾಲಕೃಷ್ಣವಿಠಲ ಉಡುಪೀಶಾ 5
--------------
ಅಂಬಾಬಾಯಿ
ಯದುನಾಥ ಯದುನಾಥ ಮುದದಿಂದಲಿ ಪೊರೆ ಪದುಮಿಣಿ ವಲ್ಲಭ ಪ. ಪೊಡವಿಯೊಳಗೆ ಪಡುಗಡಲೆಡೆವಾಸ ತಡವೇತಕೆ ಪಾಲ್ಕಡಲಶಯನ ಪೊರೆ 1 ಅಣುಮಹ ಕಾಲಾತ್ಮಕ ಸರ್ವೇಶ್ವರ ಗುಣಗಣಪೂರ್ಣನೆ ಸರ್ವವ್ಯಾಪಕ 2 ಚಿಂತನೆದೂರ ಅಚಿಂತ್ಯ ಮಹಿಮ ಗುಣ ವಂತ ಅನಂತ ಮಹಂತ ಕಾಲಾಂತಕ 3 ಸ್ಥಾವರ ಜಂಗಮ ಜೀವರ ಬಿಂಬ ಶ್ರೀ ಪಾವಮಾನಿ ಮತ ಸುಜನೋದ್ಧಾರಕ 4 ಬಾಲರೂಪ ಕಡಗೋಲ ಪಿಡಿದ ಗೋ ಪಾಲಕೃಷ್ಣವಿಠ್ಠಲ ಉಡುಪೀಶ 5
--------------
ಅಂಬಾಬಾಯಿ
ಶ್ರೀ ವೀರರಾಘವ ಅಪ್ರತಿ ಕೃಪಾನಿಧಿಯೆ ವೀರರಾಘವ ದೇವ ಕ್ಷಿಪ್ರದಲೆ ಎನ್ನಭೀಷ್ಟಗಳ ಪೂರೈಸೊ ಪ ಫಣಿಪಗಿರಿ ವೆಂಕಟನೆ ಎನ್ನ ಕುಲದೇವನೆ ಅನಂತ ಗುಣಪರಿಪೂರ್ಣ ಅನಂತ ಸುಖರೂಪ ವನಜೆಸಹ ನೀ ಇಲ್ಲಿ ವೀರರಾಘವನೆನಿಸಿ ಫಣಿಶಾಯಿ ಕಾಮದನಾಗಿರುವೆ ವಿಧಿತಾತ 1 ನಿನ್ನ ದರ್ಶನ ಮಾಳ್ಪ ಜನರ ಕಾಮದನೆಂದು ನಿನ್ನ ಬಳಿ ಬಂದಿಹೆನೊ ನಿನ್ನ ದಯದಿಂದ ಎನ್ನಭೀಷ್ಟಗಳೆಲ್ಲ ನೀ ಬಲ್ಲೆಯೋ ಸ್ವಾಮಿ ಘನ್ನ ಔದಾರ್ಯ ಕರುಣಾಂಬುಧಿಯೇ ಶರಣು 2 ವೇಧ ಮಂದಮುನಿಪೂಜ್ಯ ಬದರೀಶ ಉಡುಪೀಶ ಸ್ವಾದಿ ಯತಿವರಪೂಜ್ಯ ಭೂಧರ ಹಯಾಸ್ಯ ಪಾದತ್ರಯ ವಿಖ್ಯಾತ ವರದ ನರಹರಿ ರಂಗ ಮದ್ಗೇಹನಿಲಯ ಶ್ರೀ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು