ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಳಿನಿಯ ಬಳಿಯಲಿ ಕುಳಿತ ಮರಾಳಾ ಕೊಳಲಿನ ಬಾಲನು ಬಂದರೆ ಹೇಳಾ ಪ ಪುಳಿನದ ಕೊಳದಲಿ ಕುಳಿತು ಕಾಯುವಳಾ ಗೆಳತಿಯೆ ರಾಧೆಯು ಅವಳನು ಕೇಳಾ ಅ.ಪ ತರುಗಳ ಮರೆಯಲಿ ತುರುಗಳ ನೆರೆಯಲಿ ಕರುಗಳ ಜೊತೆಯಲಿ ನಲಿಯುತಲಿ ಅರಳಿದ ಹೂಗಳ ಪರಿಮಳ ಭಾರದಲಿ ಮೆರೆವಲತೆಯ ಬಳಿ ಇರುವನು ಒಲವಿನಲಿ 1 ಮುರಳಿಯ ನಾದವನೆಲ್ಲೆಡೆಗೆರೆವ ತರುಣಿಯರೀವಾ ಬೆಣ್ಣೆಯ ಮೆಲುವಾ ಮೆರೆವಪೀತಾಂಬರ ಉಡಿಗೆಯೊಳೆಸೆವ ಶರಣೆಂದೊಡೆ ನವಚೇತನವೀವ 2 ಪಾಡಿಪೊಗಳುವರ ಕೂಡ ನರ್ತಿಸುವಾ ನಾಡೆ ನರ್ತಿಸುವರ ನೋಡುತ ನಗುವ ಬೇಡಿದ ವರಗಳ ನೀಡುತ ನಗುವ ಮಾಡೆ ವಂದನೆಗಳ ಓಡಿಬಂದಪ್ಪುವ 3 ಜೊನ್ನದ ಬಣ್ಣವ ಹಳಿಯುತೆ ಬೆಳಗುವ ಚೆನ್ನ ಮರಾಳವೆ ನಿನ್ನೆಡೆ ಬರುವ ಅನ್ನೆಗಮೆನ್ನನೀ ಕರೆಯಲು ಮಾಡುವ ಸನ್ನೆಯ ಕಂಡೋಡಿ ಪಿಡಿಯುವೆ ಚರಣವ 4 ಬಾಲೆಯರೊಡನೆ ಕೋಲಾಟವನಾಡುವ ನೀಲಾಂಬರ ಘನ ಶ್ಯಾಮನವ ಮೇಲೆನಿಸುವ ವನಮಾಲೆಯಿಂದೆಸೆವ ಬಾಲನವನು ಮಾಂಗಿರಿಗೆ ಬಾರೆನುವ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್