ಹೇ ಪಾಪಿ ಮನಸೇ ನೀ ನಾರಾಯಣೆನೆಲೋ
ಅಪಾರ ಮಹಿಮನ ಮಹಿಮೆ ತಿಳಿದು ನೋಡೋ ಪ
‘ನಾ’ ಎಂಬೋ ಮಹದಾದಿಬೀಜದಕ್ಷರ ತುದಿ
ನಾಲಿಗೆಯಿಂದ್ಹೊರಡುವನಿತರೊ
ಳ್ಹಿಂದಿನ ನಾನಾಜನುಮದ ಪಾಪ ಪರ್ವತವೆಲ್ಲವು
ನಿವೃತ್ತಿಯಾಗಿ ಮಹ ಪಾವನನೆನಿಪುದು 1
‘ರಾ’ ಎಂದು ಮುಖದಿಂದ ಹೊರಟ ಕೂಡಲೆ
ಸರ್ವ ರವರವನರಕದ ಯಾತನಳಿದು ಭವ
ರೋಗವೆಲ್ಲನು ನೀಗಿ ಕಾಯಕರ್ಮವ ಕಡಿದು
ರಾಜಿಪ ಪರಲೋಕ ಸದರವೆನಿಸುವುದೆಲೊ 2
‘ಯ’ ಎಂದು ನುಡಿಯುತಲೆ ಜನುಮ ಸಫಲವಾಗಿ
ಎಷ್ಟೋ ಕೋಟ್ಯಜ್ಞದ ಪುಣ್ಯ ಫಲವು ದೊರಕಿ
ಯಮನ ಭೀತಿಯ ಗೆಲಿಸಿ ದಾಸರೊಲುಮೆ ಲಭಿಸಿ
ಎಸೆವ ತ್ರಿಕಾಲಜ್ಞಾನ ಸ್ಥಿರವಾಹುದೆಲೊ 3
‘ಣ’ ಎಂದು ಸಂಪೂರ್ಣ ಉಚ್ಚರಿಸಿದ ಮಾತ್ರವೆ
ಕರತಲ ಮಾಗಿ
ನಿತ್ಯ ನಿರ್ಗುಣನಂಘ್ರಿ ಕಂಗಳೊಳ್ಹೊಳೆಯುತ
ನಿತ್ಯಾನಂದದ ಪದವಿ ಕೈವಶವಹದೆಲೊ 4
ನಿರಾಮಯ ಶ್ರೀರಾಮ ನಿಗಮಗೋಚರ ನಿರಂಜನ
ನಿಜಗುಣನನುಪಮಮಹಿಮೆ
ನಿಜಮತಿಯಿಂದರಿತು ನಿರ್ಮಲ ಮನಸಿನಿಂ
ನೆನೆಯಲು ಘನಮುಕ್ತಿ ಸಾಮ್ರಾಜ್ಯ ಪಡೆಯುವಿ 5