ಪೇಳಲಳವಲ್ಲ ನಮ್ಮಯ್ಯನಾಟ ತಿಳಿವರಾರಿಲ್ಲ ಪ
ಪೇಳೇನೆಂದರೆ ನಿಲುಕೊ ಮಾತಲ್ಲ
ಹೇಳಿಕೆ ಕೇಳಿಕೆಗೆ ಮೀರಿದ
ಮೇಲುಮಹಿಮನ ಲೀಲಾಜಾಲವ ಅ.ಪ
ಸಾಧ್ಯ ಮಾತಲ್ಲ ಜಗಸೂತ್ರನಾಟಕೆ
ಆದಿ ಅಂತಿಲ್ಲ ಜಗಮೂರರೊಳಗೆ
ಸಾಧನಿಕರೆಲ್ಲ ನಿಜಭೇದ ತಿಳಿದಿಲ್ಲ
ಸಾಧನಿಟ್ಟು ಆವಕಾಲದಿಂ
ನಾದ ತಡೆಯದೆ ವೇದಗಳ ಬಿಡ
ದೋದಿ ದಣಿದು ಇನ್ನು
ಆದಿಮಹಿಮನ ಪಾದಕಾಣವು 1
ಬಾಗಿ ಅನುಗಾಲ ನಿಜತತ್ವಭೇದಿಸಿ
ನೀಗಿ ಭವಮಾಲ ಜಡವಾದ ದುರ್ಭವ
ರೋಗಗಳುಯೆಲ್ಲ ಪಾರಾಗಿ ನಿರ್ಮಲ
ರಾಗಿ ಪರಮಯೋಗ ಒಲಿಸಿ
ಯೋಗಿಗಳು ಮಹ ಉಗ್ರತಪದಿಂ
ಯೋಗಬೆಳಗಿನೊಳಗೆ ನೋಡಲು
ನಾಗಶಯನ ಮಹಿಮೆ ತಿಳಿಯದು 2
ಸಾನಂದಾದಿಗಳು ಮಹ ಭೃಗು ಗಾರ್ಗೇಯ ಮನು
ಮುನ್ಯಾದಿಗಳು ದೇವರ್ಷಿ ನಾರದ
ಶೌನಕಾದಿಗಳು ಘನ ಸಪ್ತಋಷಿಗಳು
ಅನಂತಾನಂತ ಪ್ರಳಯದಿಂದ
ಜ್ಞಾನ ಬೆಳಗಿನೋಳ್ನಿಂತು ನೋಡಿ
ಕಾಣದೆ ಶ್ರೀರಾಮಪಾದ
ಮೌನದೋಳ್ಮುಳುಗೇಳುತಿಹರು 3