ಮೋಸಗೊಳ್ಳದಿರು ಮನವೆ ಹೇಸಿಕೆಯಲಿ
ದೋಷವನ್ನು ತಿಳಿಯದೆ ಕೀಳಾಸೆ ಕೆಲಸ ಮಡುವಿನಲ್ಲಿ ಪ.
ಫುಲ್ಲ ಪದ್ಮದಂತೆ ಪೊಳೆವ
ಚೆಲ್ವ ಮುಖವೆಂಬೀ ಸುರಿವ
ಜೊಲ್ವಿ ಶೀಗೆಬೀಜ ಪೋಲ್ವ
ಹಲ್ಲ ಸಾಲನೆಲ್ಲಿ ಮರತಿ 1
ಗೆಜ್ಜೆ ಕಾಲುಂಗುರಗಳಿಟ್ಟು
ಲಜ್ಜೆ ತೋರಿ ನಗುತ ಬರಲು
ಹೆಜ್ಜೆಯನ್ನೆ ನೋಳ್ಪೆ ಹೊಲಸು
ಖಜ್ಜಿಯ ಕಲೆಯ ಮರೆತಿ 2
ವಿಟರ ನೋಡುತ ಘಟ
ಘಟನೆ ಬರುವಾಕೆಯ
ಘಟನೆ ಬಯಸಿ ದುಸ್ಸಂ-
ಕಟಗೊಂಬದ್ಯಾಕೆ ಮರೆತಿ 3
ಅಕ್ಷಿಯನ್ನು ತಿರುಹುತ್ತ
ಸೂಕ್ಷ್ಮ ವಸ್ತ್ರ ಸುತ್ತಿ ವೇಶ್ಯಾ
ಲಕ್ಷಣವ ಕಂಡು ಶುಂಭ
ಮಕ್ಷಿಕಾ ವಿಹಾರ ಬಲದಿ 4
ವರನಾರಿಯೆಂಬುದೊಂದೆ
ಮರುಳು ಭಾವನೆ ಮೋಹ
ಕರವಲ್ಲದೆ ಬೇರೊಂದು
ಸರಸತನವಿಲ್ಲಿಂದು 5
ಈಶನಿತ್ತದುಂಡು ನಿತ್ಯ
ತೋಷಗೊಳ್ಳದಹೋರಾತ್ರಿ
ಘಾಸಿ ಮಾಡದಿರು ಭಾರ-
ತೀಶನ ಪದವ ಸೇರು 6
ಬೇಡ ಬೇಡವಿನ್ನು ಭ್ರಾಂತಿ
ಮಾಡು ಮೋಹಾಗ್ನಿಗೆ ಶಾಂತಿ
ಬೇಡು ಶೇಷಾದ್ರೀಶನಡಿಯ
ಕೊಡುವಾಭೀಷ್ಟ ನಮ್ಮೊಡೆಯ7