ಚಾರು ನವರತುನ
ಮಣಿ ಮಂಟಪಕೆ ಪ
ನೀರಜಾಕ್ಷ ಆ ರುಕುಮಣಿ ಭಾ
ಮೆಯರೊಡಗೂಡಿ ಅ.ಪ
ಹೇಮದ ತಂಬಿಗೆ ಬಿಂದಿಗೆಗಳಲಿ
ನೇಮದಿ ಉದಕವ ತುಂಬಿಹರೊ
ಕೋಮಲ ತುಳಸೀ ಮಲ್ಲಿಗೆ ಸಂಪಿಗೆ
ಪೂಮಳೆಗರೆಯಲು ತಂದಿಹರೊ
ಸ್ವಾಮಿ ನಿನಗೆ ಪರಿಮಳ ದ್ರವ್ಯಗಳನು
ಪ್ರೇಮದಿಂದಲರ್ಪಿಸಲಿಹರೊ
ಚಾಮರ ಸೇವೆಯ ಅರ್ಪಿಸುವರು ಹರಿ
ನಾಮ ಹಾಡಿ ಸ್ವಾಗತ ಬಯಸುವರೊ 1
ಮೇಳದ ಮಂಗಳವಾದನ ಒಂದೆಡೆ
ಕಹಳೆ ಶಂಖ ದುಂದುಬಿ ಧ್ವನಿಯು
ತಾಳ ತಂಬೂರಿ ಮೃದಂಗದ ಶೃತಿಗಳ
ಮೇಳನದಲಿ ದಾಸರ ಗಾನ
ಶೀಲರಿವರು ಸುಸ್ಸರದಲಿ ವೇದವ
ಪೇಳಲು ಕಾಲಕೆ ಕಾದಿಹರೊ
ಬಾಲರು ಸಂಭ್ರಮದಲಿ ಝಾಂಗಟೆ ಕೈ
ತಾಳಗಳನು ಕರದಲಿ ಪಿಡಿದಿಹರೊ 2
ಲಾಡು ಜಿಲೇಬಿಯ ರಾಶಿಗಳನು ಹೊಸ
ಗೂಡೆಗಳಲಿ ತುಂಬಿಟ್ಟಿಹರೊ
ನೋಡಲೆ ದಣಿಸುವ ತೆರದಲಿ ಚತುರರು
ಮಾಡಿದರೋ ಪಕ್ವಾನ್ನಗಳ
ಜೋಡಿಸಿ ಕರಗಳ ಕಾದಿರುವರೋ ಬಲು
ನಾಡುನಾಡುಗಳ ಮಂದಿಗಳು
ಈಡೇರಿಸುವದು ಭಕುತ ಮನೋರಥ
ರೂಢಿಯು ನಿನ್ನದು ಶರಣ ಪ್ರಸನ್ನನೆ 3