ನೋಡಿದೆನೋ ಕೊಂಡಾಡಿದೆನೋ ಪ
ಜೋಡಿಸಿ ಕರಗಳ ಬೇಡಿದೆ ಕೃಷ್ಣನ ಅ.ಪ
ಮೂಡಲು ಸೂರ್ಯನು ಹಿಮದ ಕಣಗಳಂತೆ
ಓಡಿದು ಮೋಹವು ಕೂಡಿತು ಧೈರ್ಯವು
ನೋಡಲು ಕೃಷ್ಣನ ಮಂಗಳ ಮೂರ್ತಿಯ
ಈಡೇರಿತು ಮನದಾಸೆಯು ಕೃಷ್ಣನ 1
ಕಳೆಯಿತು ದುರಿತವು ಬೆಳೆಯಿತು ಸುಕೃತವು
ಸೆಳೆದನು ಮನವನು ತನ್ನಡಿಗಳಲಿ
ಬಳಿಯಲಿ ರುಕ್ಮಿಣೀ ಭಾಮೆಯರೊಡಗೂಡಿ
ಕೊಳಲೂದುವ ಮಂಗಳಕರ ದೃಶ್ಯವ 2
ಉಕ್ಕಿತು ಹರುಷವು ಪರಮ ದರುಶನದಿ
ನಕ್ಕನು ನೋಡುತ ಕರುಣಾಪಾಂಗದಿ
ಭಕ್ತ ಪ್ರಸನ್ನನು ತಕ್ಕವನೆಂದೆನ್ನ
ಅಕ್ಕರೆಯಿಂದಲಿ ಕರೆಯುವಂತಿರುವುದ 3