ಅಕ್ಷಯ ಗುಣಪೂರ್ಣ ಲಕ್ಷ್ಮೀರಮಣ ಪ
ಕುಕ್ಷಿಯೊಳಗೆ ಜಗವಿಟ್ಟು ರಕ್ಷಿಪ ಸ್ವಾಮಿ
ಈಕ್ಷಿಸಿ ಕರುಣ ಕಟಾಕ್ಷದಿ ಸತತ ಅ.ಪ.
ಏಸೇಸು ಕಲ್ಪದಲ್ಲೂ ಈಶ ನೀನಿಹುದಯ್ಯ
ದಾಸರು ಜೀವರ್ಕಳು ಕೃಪಾಳು
ಕ್ಲೇಶ ಸುಖಂಗಳಿಗೆ ನೀನೆ ಸ್ವತಂತ್ರನೆಂದು
ಸೂಸಿ ಪೇಳುತ್ತಲಿಹರು ಸಜ್ಜನರು
ವಾಸುದೇವನೆ ಸರ್ವಾಸುನಿಲಯನೆ
ಏಸೇಸು ಬಂದರು ದಾಸರ ಬಿಡದಿರು
ನೀ ಸಲಹದೆ ಉದಾಸೀನ ಮಾಡಲು
ಆಸರೆ ಯಾರಿನ್ನು ಶಾಶ್ವತ ವಿಭುವೆ 1
ನಿನ್ನಧೀನನÀವನು ನಿನ್ನ ದಾಸರ ಸೂನು
ಎನ್ನುವ ಸಥೆಯಿಂದ ಮುಕುಂದ
ನಿನ್ನನೆ ಬೇಡುವೆ ನಿನ್ನನೆ ಕಾಡುವೆ
ಅನ್ಯಥಾ ಗತಿಗಾಣೆ ನಿನ್ನಾಣೆ
ನಿನ್ನ ದಾಸರ ಪದವನ್ನು ಪಿಡಿದು ನಾ
ನಿನ್ನನು ಸ್ತುತಿಸಿದೆನೆನ್ನುತ ಕೃಪೆಗೈದು
ಬಿನ್ನಪ ಲಾಲಿಸಿ ಬನ್ನವ ಕಳೆದು
ಘನ್ನ ಭಕುತಿಯಿತ್ತು ಧನ್ಯನ ಮಾಡೊ 2
ಶರಣರ ಮಹದೇವ ಶರಣರ ಬಿಡದೆ ಕಾವ
ಶರಣರ ಉದ್ಧಾರ ಗಂಭೀರ
ಶರಣ ರಕ್ಷಾಮಣಿ ಶರಣ ತ್ರಿದಶ ತರು
ಶರಣ ಸುರಧೇನು ಎನಿಸಿನ್ನು
ನಿರುತದಿ ಪೊರೆಯುವ ಬಿರುದಗಳರಿತು
ಶರಣೆಂದು ನಿನ್ನಯ ಚರಣ ಕಮಲವನು
ಮರೆಹೊಕ್ಕೆನು ಕಾಯೊ ಪರಮ ದಯಾಕರ
ಕರಿರಾಜವರದ ಶ್ರೀಕಾಂತ ನಿಶ್ಚಿಂತ 3