ಆತ್ಮನಿವೇದನೆ
ಆದಿಮೂರುತಿ ಪರಂಜ್ಯೋತಿಪಿತನೇ ದಾಶರಥಿ ಪ.
ಕೊಡು ಭಕ್ತಿಶಕ್ತಿ ಸಂಪದಸಿರಿಯ
ಕಡು ಬಾಲಕರೊಳು ಕೆಡುಕು ಮಾಡದೆ ನಡು
ಕಡೆಗಳಿಲ್ಲದ ಜಗದೊಡೆಯ ಜನಾರ್ದನ 1
ಶತಕೋಟಿ ಬ್ರಹ್ಮಾಂಡಘಟವ ನಿರುತದಿ ಧರಿಸಿರುವ
ಪ್ರಥಮಪುರುಷ ನಿನ್ನ ಪದವ
ಕ್ಷಿತಿಯೊಳೀಕ್ಷಿಪಗೆ ಚೋದಿಗವೆನೆ ರತಿ-
ಪತಿಪಿತನೆ ಬಂದು ನಡೆಸೆನ್ನ ಮುಂದು 2
ಕುಕ್ಷಿಯೊಳೀರೇಳು ಜಗವ ಧರಿಸಿರುವ
ಕ್ಷಯ ಗುಣದಿಂದ ಮೆರೆವ
ಲಕ್ಷ್ಮೀನಾರಾಯಣ ಲಕ್ಷ ಅವಗುಣಗಳ
ಈಕ್ಷಿಸದೆನ್ನನು ರಕ್ಷಿಸಬೇಕೆಂದು 3