ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟಾದರು ದಯಮಾಡು ಪಂಡರಿನಾಥ ಪಾದ ಮುಟ್ಟಿ ಪ್ರಾರ್ಥಿಪೆನು ಪ ದಾನಧರ್ಮವು ಮಾಡಬೇಕೆಂದು ಮನವಿರೆ ದಾನವಾಂತಕ ಕೃಷ್ಣ ಧನವಿಲ್ಲವಯ್ಯ ಗಾನಲೋಲನೆ ಭಕ್ತಪಾಲ ನಿನ್ನಯ ಪಾದ ಧ್ಯಾನವ ಮಾಳ್ಪರ ಪಾದಧ್ಯಾನ ಕೊಡಿಸುದೇವ 1 ತೀರ್ಥಯಾತ್ರೆಗಳಿಂದ ಪಾರ್ಥಸಾರಥಿ ಕೃಷ್ಣ- ಮೂರ್ತಿ ಸೇವಿಸಲಸಮರ್ಥನಾಗಿರುವೆ ಮಾತು ಮಾತಿಗೆ ಕೃಷ್ಣಗೋವಿಂದ ಮಾಧವ ಶ್ರೀಪತಿ ಶ್ರೀಧರ ಸಲಹೆಂಬ ಸ್ಮರಣೆ 2 ಜ್ಞಾನಿಗಳೊಡನಾಡಿ ಶ್ರೀನಿವಾಸನೆ ನಿನ್ನ ನಾನಾಲೀಲೆಗಳ ಧ್ಯಾನಿಸಲಿಲ್ಲ ಹರಿಯೆ ಜ್ಞಾನಿಗಳರಸ ಭಕ್ತರ ಸುರಧೇನು ಅಜ್ಞಾನಿಗಳಳಿದು ಸುಜ್ಞಾನಜನರ ಸಂಘ 3 ಅಗಣಿತ ಮಹಿಮನೆ ನಿಗಮಗೋಚರ ಕೃಷ್ಣ ಖಗವಾಹನ ಕಂಸಾರಿಯೆ ದೇವ ಹಗಲು ಇರುಳು ನಿನ್ನ ಬಗೆಬಗೆ ಸ್ತುತಿಪರ ಪಾದಗಳು ಸೇವಿಪ ಪರಮಲಾಭವನು 4 ಕರೆ ಕರೆಗೊಳಿಸದೆ ಕಡಲಶಯನನೆ ಎನ್ನ ತೊಡರುಗಳನೆ ಬಿಡಿಸೆಂದು ಮೊರೆ ಇಡುವೆ ಮಡುವಿನೊಳ್ ಗಜವನುದ್ಧರಿಸಿ ರಕ್ಷಿಸಿದಂಥ ಕಮಲನಾಭ ವಿಠ್ಠಲನೆ ನಿನ್ನ ಸ್ಮರಣೆ 5
--------------
ನಿಡಗುರುಕಿ ಜೀವೂಬಾಯಿ
ಈ ದೇಹ ನಿನ್ನ ಒಳಗೊಂಡಿತೊ ಇಷ್ಟಾದ ಮೇಲೆ ಪ. ದೇಹ್ಯ ಬಾಹ್ಯ ವ್ಯಾಪಾರವ ನೀ ಪರಿಹರಿಸಿದೇ ದೇವ ಅ.ಪ. ದೇಹದೊಳಗಿದ್ದವರು ಬಾಹ್ಯ ವ್ಯಾಪಾರಕ್ಕೆಳೆಯೆ ಈ ದೇಹ ಬಾಂಧವರು ಎಲ್ಲ ಎನ್ನ ದೇಹ ಕೀಳು ಮಾಡಿ ನೋಡೆ ದಾಹ ಹತ್ತಿತೋ ನಿನ್ನಲ್ಲಿ ದೇಹ ಸಾರ್ಥಕವಾಗಲು 1 ರಂಗ ನಿನ್ನ ಸ್ತುತಿಮಾಡೆ ಹಂಗಿಸುವರೆಂದು ಇದ್ದೆ ಹಂಗಿಸಿ ಭಂಗಿಸಿ ರಂಗಕ್ಕೆಳಸಿ ಎನ್ನ ನಿನ್ನ ಅಂತರಂಗಕ್ಕೆ ಎಳೆತಂದೆ ಹರಿ ರಂಗಾ ನಿನ್ನ ಸಿರಿಯಾರೋ ಮಂಗಳ ಮಹಿಮ 2 ಕಂತು ಜನಕನೆ ನಾ ನೆಂದು ಸ್ತುತಿಸಲು ನಿನ್ನ ಅಂತರದಂತಿರಲಿ ಪಂಥ ಬೇಡ ಎನ್ನ ಮೇಲೆ ಇಂತು ಕೃಪೆ ತೋರಿಸುತ ನಿಂತು ಅಂತರಂಗಕೆ ಬಾ ಲಕ್ಷ್ಮೀಕಾಂತ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಮೋಸಹೋದೆವೈ ಸಖಿ _ ವಾಸುದೇವನ ತಿಳಿಯದೆ ಪ ಮೋಸಹೋದೆವೈ ಸಖಿ _ ಮೂಸಿತು ಮನವಮ್ಮ ದೋಷದೂರ ಜಗದೀಶನ ಈ ಲೋಕಶಿಶುವೆಂದರಿಯುತ ಅ.ಪ. ಪುಟ್ಟಿದ ಶಿಶು ಮೊಲೆ ಕೊಟ್ಟವಳಳಿದನೆ ಸುಟ್ಟಾನು ದೈತ್ಯರ ಗೋಷ್ಠಿಗಳೆಲ್ಲವ ಬೆಟ್ಟವನೆತ್ತುತ ವೃಷ್ಟಿಯ ತಡೆದನೆ ಮೆಟ್ಟುತ ಕಾಳಿಯ ತುಷ್ಟಿಯ ನೀಡಿದನೆ ಇಷ್ಟಾದರುನಾವು ತಿಳಿಯದೇ ಸೃಷ್ಟಿಗೊಡೆಯ ಬಹು ದುಷ್ಟನು ಎಂದೇವೆ ಪಟ್ಟೆ ಪೀತಾಂಚರ ಕದ್ದವನೆಂದೇವೇ ಇಟ್ಟನು ಕಣ್ಣನು ನಮ್ಮಲೆಂದೇವೇ ಜೇಷ್ಠ ಶ್ರೇಷ್ಠ ಪರಾತ್ಪರ ಹರಿ ಸಂ- ತುಷ್ಟ ಗುಣಾರ್ಣವ ನಿರುಪಮ ಸುಖಿ ಜಗ- ಚೇಷ್ಟೆಯ ನಡೆಸುವ ಶಿಷ್ಯರ ಧೂರೆ ಪರ- ಮೇಷ್ಠಿಯ ಪಿತ ನೆಂದರಿಯದೆ ಕೃಷ್ಣನಾ 1 ಮೆಲ್ಲನೆ ಬಾಯಲಿ ಲೋಕವ ನೆಲ್ಲವ ತಾಯಿಗೆ ತೋರಿದನೆ ಬಲ್ಲಿದನಿವ ತಾ ಬೆಂಕಿ ಜ್ವಾಲೆಯನುಂಗುತ ತಾಪೊರೆದನೆ ಗೊಲ್ಲರಪತಿ ಮುಳುಗಲು ಪಾತಾಳದಿ ತಂದನೆ ತಂದೆಯನು ಬಾಲರ ಗುಂಪಿಗೆ ಲೋಕಗಳೆಲ್ಲವ ನೀರೋಳು ತೋರಿದನೆ ಮೆದ್ದನು ಎಂದೇವೇ ನಿಲ್ಲದೆ ನಿಶಿಯೊಳು ನಮ್ಮನು ಕೆಡಿಸಿದನೆಂದೇವೆ ಸುಳ್ಳನು ಹೇಳುವ ಜಾಣ ಗೋಪಾಲನು ಎಂದೇವೇ ಸಲ್ಲದ ನುಡಿಗಳ ನಾಡುತ ಕಾಲವ ಕಳೆದೇವೇ ಎಲ್ಲರ ಹೃದಯದಿ ಮತ್ತೆ ಬ್ರಹ್ಮಾಂಡದಿ ಒಳಹೊರ- ನೆಲ್ಲಿಯು ತುಂಬಿಹಏಕನು ಬಲ್ಲನು ಎಲ್ಲವ ಎಲ್ಲವ ಮಾಡುತ ಮಾಡಿಸಿ ಪೊರೆವನು ದೋಷಗಳಿಲ್ಲದ ಸ್ವರತ ರಮಾಧವ ಕೃಷ್ಣನು ಎನ್ನದೇ 2 ತಿಂಗಳ ಬೆಳಕಲಿ ರಂಗನು ಬಂದಾನೇ ಅಂಗಜತಾಪವ ಹರಿಸುವೆನೆಂದಾನೆ ಕಂಗಳಿಗ್ಹಬ್ಬವ ನೀಡುತ ಪೊರೆದಾನೇ ಹಿಂಗದೆ ತನುಮನ ಎಲ್ಲವ ಸೆಳೆದಾನೇ ಮಂಗಳಕಾಯನು ನೀಡಲು ನಮಗಾ ಲಿಂಗನ ಸುಖವನು ಬಹುಮುಡಿ ಆದಾನೇ ಅಂಗವ ಮರೆಸುತ ಮಹದಾನಂದ ತ- ರಂಗದಿ ಒಯ್ಯುತ ಚೆಲುವನು ಕೂಡಿದನೇ ಅಂಗನೆ ಬುದ್ಧಿಲಿ ಇವನನು ತಿಳಿಯದೇ ರಾಗ ವಿಹೀನನ ನಮ್ಮೊಡನಾಡಿಯು ಎಂದೇವೇ ಸಾಗುತ ಬಂದಿಹ ನಮ್ಮಯ ರೂಪಕೆ ಎಂದೇವೇ ನಮ್ಮನು ಕೂಡುತ ಭೋಗವ ಪಡೆಯುವನೆಂದೇವೇ ಗಾಗ್ರ್ಯರು ಮುಂಚೆಯೆ ಪೇಳಿದ ನುಡಿಗಳ ಮರೆತೇವೇ ಭೋಗಿಶಯನ ಜಗದೇಕವೀರ ಸಕಲಾಗಮ ವಂದಿತ ಸಾಗಿಸೆ ದಿತಿಜರ ಕೃಷ್ಣನು ಬಂದಿಹ ದೇವಕಿ ಜಠರದಿ ಬಾಗುತ ಜಯಮುನಿ ವಾಯ್ವಂತರ್ಗತ ಶ್ರೀ ಕೃಷ್ಣವಿಠಲನು ಭಾಗವತgಶ್ರಯ ಪೂರ್ಣಾನಂದನ ಲೀಲೆಯ ತಿಳಿಯದೇ 3
--------------
ಕೃಷ್ಣವಿಠಲದಾಸರು
ಯಜನವಾಗಲಿ ನಾನು ಭುಜಿಸುವುದು ಎಲ್ಲ ಪ ಅಜಪಿತನೆ ಅದರ ಅನುಸಂಧಾನವನು ಅರಿಯೆ ಅ.ಪ ದೇಹವೆಂಬುದೆ ಯಜ್ಞಶಾಲೆಯಾಗಿ ಮಹಯಜ್ಞಕುಂಡವು ಎನ್ನ ವದನವಾಗಿ ಆವಹನೀಯಾಗ್ನಿಯು ಮುಖದಲ್ಲಿ ಹೃದಯದೊಳು ಗಾರ್ಹಸ್ಪತೀ ದಕ್ಷಿಣಾಗ್ನಿಯು ಸುನಾಭಿಯಲ್ಲಿ 1 ಅರಿ ಪಂಚಾಗ್ನಿಯೊಳು ಆಕ್ಷಣದಿ ಪ್ರಾಣಾದಿ ಪಂಚರೂಪಗಳು ಹೋತಾಉದ್ಗಾತಾದಿ ಋತ್ವಿಕ್ಕುಗಳಾಗಿ ನಿಂತಿಹರೆಂದು2 ಆಹುತಿಯ ಕೊಡತಕ್ಕ ಶೃಕಶೃಕ್‍ಶೃವಗಳು ಬಾಹುಗಳು ಇಹಭೋಜ್ಯವಸ್ತುವೆಲ್ಲ ಆಹುತಿಯು ದೇಹಗತ ತತ್ವರು ಪರಮಾತ್ಮ ಬ್ರಾಹ್ಮಣರು ಜೀವ ದೀಕ್ಷಿತನು ಬುದ್ಧಿತತ್ಪತ್ನಿ 3 ಅಹಂಮಮತಾದಿ ಅರಿಷಡ್ವರ್ಗಗಳು ವುಹಯಜ್ಞದ ಯೂಪಸ್ಥಂಭದ ಪಶುಗಳು ಅಹರಹ ಬಹ ನೀರಡಿಕೆಯು ಕುಡಿವನೀರೆಲ್ಲವು ಯಜನಕಾರ್ಯದ ಮಧ್ಯ ಪರಿಷಂಚಾಮಿ4 ಇಷ್ಟಾದರನುಸಂಧಾನವನೆ ಕೊಡುಕಂಡ್ಯ ಶ್ರೇಷ್ಠಮೂರುತಿ ಶ್ರೀ ವೇಂಕಟೇಶ ನಿಷ್ಠೆಯೆನ್ನೊಳಗಿಲ್ಲ ಉರಗಾದ್ರಿವಾಸವಿಠಲ ಹೊಟ್ಟೆಹೊರೆವುದು ನಿನಗೆ ತುಷ್ಟವಾಗಲಿ ದೇವ 5
--------------
ಉರಗಾದ್ರಿವಾಸವಿಠಲದಾಸರು