ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಅಚಿಂತ್ಯಾದ್ಭುತ ಮಹಿಮ ಈ ಸಚರಾಚರದೊಳು ಪ್ರಚುರನಾಗಿಹೆ ದೇವಾ ಮುಚುಕುಂದವರದಾ ಪ ಅಚಲಭಕುತಿಯು ನಿನ್ನ ಚರಣದಿ ಕಿಂಚಿತಾದರೂ ಪ್ರಚುರಮಾಡಿಸು ಅತಿಚಂಚಲನು ಬಲು ವಂಚಕನು ನಾ ಅನು- ಚಿತೋಚಿತ ಕರ್ಮವರಿಯೆನೋ ಅ.ಪ ವಿಪಿನವಾಸದಿ ಎನಗೆ ವಿಪರೀತವನು ತೋರಿ ಅಪರಾಧವೆಣಿಸದೆ ಪಾಲಿಸಿದೇ ಕೃಪಣವತ್ಸಲ ನೀನೇ ಕೃಪೆಮಾಡಿ ಸ್ವಪನದಿ ಅಪರಿಮಿತದ ವಿಶ್ವರೂಪವ ನೀ ತೋರ್ದೆ ಅಪರಾಧಿ ನಾನಹುದೋ ಸ್ವಾಮಿ ಅಪವರ್ಗಪ್ರದನು ನೀನು ಸಫಲಗೊಳಿಸಿದೆ ಎನ್ನ ಮನದನು- ತಾಪವನು ಪರಿಹರಿಸಿ ಕಾಯ್ದೆ ನಿನ್ನಡಿದಾವರೆಯ ನಂಬಿದೆನೋ ಶ್ರೀ ಪರಮಹಂಸರಿಂದ ನುಡಿಸಿದ ರಹಸ್ಯಗಳು ಅದುಏನೋ ಶ್ರೀ ಪುರುಷೋತ್ತಮನೆ ನೀನೆನ್ನಭಯಹಸ್ತದಿ ಕರೆದ ಪರಿಯೇನೋ ಅದನೊಂದನರಿಯೆನೊ ಈಪರಿಯ ಕರಚರಣದಲಿ ಚರಿಸಿದ ಅನುಪಮ ಕ್ರಿಯೆಯ ನೋಡಿ ಮನದೊಳು ಸುಪುತಕಾಲದಿ ತೈಜಸನೆ ನೀನೆನ್ನ ಪುಳುಕಾಂಕಿತನ ಮಾಡಿದೇ 1 ಅಮಿತ ಕಾರ್ಯವನೆಸಗೀ ಬಲು ಯಾತನೆಗೊಂಡು ಇಳೆಯೊಳು ಬಾಳೀ ದು- ರ್ಬಲನಾಗಿದ್ದರು ಎನ್ನ ಛಲವು ತೊಲಗಲಿಲ್ಲ ಜಲಜನಾಭನೆ ನೀನೆ ಕರುಣಿಸಿ ಸಲಹದಿರ್ದೊಡೆ ಪ್ರ- ಬಲರೆನ್ನನು ಕವಿದು ಮನಚಂಚಲವ ಪುಟ್ಟಿಸೀ ವಲೀಮುಖನಂತಾಡಿಸುವರೋ ಕಲಿಮಲವನ್ನೆ ಪರಿಹರಿಸುವುದೋ ಮನದಿ ಎಡೆಯು ದುರ್ಲಭವೋ ಒಲುಮೆಯಿಂದಲಿ ಸಾಧಿಸಲು ಎಲ್ಲೆಡೆಯ ಸರ್ವತಂತ್ರ ಸ್ವಾತಂತ್ರ್ಯ ನಿನ್ನದೋ ಭೋ ಜಗತ್ಪತೇ ಕಾಲನಾಮಕ ನೀನೆ ಆಪತ್ಕಾಲಬಾಂಧವವೆಂದು ನಂಬಿದೆ ಜಾಲಮಾಡದೆ ಎನ್ನ ಜೀವಿತದಲ್ಪಕಾಲದಿ ಕರುಣೆ ತೋರೈ2 ತುಷ್ಟನೆಂತಾಗುವೆಯೊ ಭ್ರಷ್ಟಪಾತಕಿ ನಾನು ಕಷ್ಟವಲ್ಲವೋ ನಿನಗೆ ಶ್ರೇಷ್ಟಮೂರುತಿಯೆ ಇಷ್ಟಮೂರುತಿಯೆಂದು ಇಷ್ಟು ನುಡಿದೆನೊ ಸಾಷ್ಟಾಂಗ ನಿನ್ನೊಳು ಇರಲೋ ಇಷ್ಟೇ ಎನ್ನದೊ ದೇವಾ ಕಷ್ಟಕಷ್ಟವೊ ಬೆಟ್ಟದೊಡೆಯ ಕೊಟ್ಟುದಷ್ಟು ನಿನ್ನದಯ್ಯಾ ಇಷ್ಟೆಬೇಡುವೆ ಎನಗೆ ಎ- ಳ್ಳಷ್ಟು ಭಕುತಿಯ ಕೊಡದಿರುವೆಯಾ ಸೃಷ್ಟಿಸ್ಥಿತಿಲಯನಿಯಮನಾದ್ಯಷ್ಟ ಕತೃತ್ವವು ನಿನ್ನದೊ ಅಷ್ಟಾಂಗಯೋಗದಿ ತುಷ್ಟಪಡಿಸೆ ತನುಮನೋಧಿಷ್ಟಾನವು ನಿನ್ನದೊ ಶ್ರೇಷ್ಠಮೂರುತಿ ಸುಲಭದಲಿ ನೀ ದೃಷ್ಟಿಗೋಚರವಾಗುವುದು ಇನ್ನೆಂತೋ ಹಾ ಕಷ್ಟಕಷ್ಟವೋ ಸೃಷ್ಟಿಯೊಳು ನಾನೆಷ್ಟರವ ನಿನ್ನಿಷ್ಟಬಂದಂತಾಗಲಿ ಭವ- ಶ್ರೀ ವೇಂಕಟೇಶ ಉರಗಾದ್ರಿವಾಸವಿಠಲ 3
--------------
ಉರಗಾದ್ರಿವಾಸವಿಠಲದಾಸರು
ಕಷ್ಟಹರಿಸೊ ಪರಮೇಷ್ಟಿಪಿತನೆ ನೀ ಕೈ ಬಿಟ್ಟರೆ ಸೃಷ್ಟಿಯೊಳು ಪಾರುಗಾಣುವುದೆಂತೂ ಪ ಇಷ್ಟದಿಂದಲೋ ಅನಿಷ್ಟದಿಂದಲೋ ನಾನೇ ಹುಟ್ಟಿಬಂದೆನೆ ದೇವ-ನಿನ್ನಿಷ್ಟದಿಂದಲ್ಲವೇ ಅ.ಪ ಬಿಂಬನೆನಿಸಿದೆ ಎನಗೆ ಪ್ರತಿಬಿಂಬ ನಾ ನಿನಗೆ ಬಿಂಬ ಪ್ರತಿಬಿಂಬಕೆ ಉಪಾಧಿಯು ನಿತ್ಯ- ವೆಂಬನ್ವಯಕೆ ಗುಣತ್ರಯಬದ್ಧವೇ ಕಾರಣ- ವೆಂಬ ಗುಣಜೀವಸ್ವರೂಪೋಪಾಧಿಯು ಬೆಂಬಲನೀನಿದ್ದೂ ಗುಣಕಾರ್ಯಕನುವಾಗಿ ಇಂಬುಕೊಡುವೆ ಫಲಭೋಗಿಸಲೀವೇ ಎಂಬನುಡಿ ಶ್ರುತಿಶಾಸ್ತ್ರಸಿದ್ಧವು ನಂಬಿಹುದು ಜಗವೆಲ್ಲ ಸತ್ಯವು ಶಂಬರಾಂತಕ ಪಿತನೆ ಎನ್ನ ಹೃದ- ಯಾಂಬರದಿ ನಿನ್ನ ಬಿಂಬ ತೋರೈ 1 ಕಾಲಕರ್ಮಾದ್ಯಷ್ಟಗುಣಗಳೆಲ್ಲವು ನಿಜ- ವೆಲ್ಲಜಡಗಳು ಮತ್ತು ಅಚೇತನಂಗಳೈ ಶೀಲ ಮೂರುತಿ ನೀ ಪರಮ ಚೇತನನಾಗಿ ಎಲ್ಲ ಕಾಲದಿ ನಿನ್ನ ನಿಯಮನಂಗಳೈ ಕಾಲಕರ್ಮಗುಣಂಗಳೇನಿಹುದೆಲ್ಲ ಫಲಪ್ರದಾನವ ಮಾಡೆ ಶಕ್ತಿ ಜಡಕೆಂತಿಹುದಯ್ಯ ಕಾಲನಾಮಕ ನೀನೆ ಸರ್ವ ಕಾಲದಲಿ ಸ್ವಾತಂತ್ರ್ಯ ನಿನ್ನದೋ ಇಲ್ಲ ಘನ ಸಮರಿಲ್ಲ ಸರ್ವಕರ್ಮ ಫಲವೆಲ್ಲ ನೀನೆ ದಾತೃವೋ 2 ಮರ್ಮವರಿಯೆನೊ ದೇವ ಧರ್ಮಭ್ರಷ್ಟನಾದೆ ಕರ್ಮಫಲಾನುಭವಮಾಡಿ ಬೆಂಡಾದೆನು ಕರ್ಮ ತಾ ಶಿಕ್ಷಿಸಲರಿಯದು ನ್ಯಾಯ ಧರ್ಮಾಧಿಪತಿ ಭೀಕರ ಫಲಕೊಟ್ಟು ಶಿಕ್ಷಿಪಂತೆ ಧರ್ಮಮೂರುತಿ ಶುದ್ಧನಿಷಿದ್ಧಕರ್ಮಂಗಳಿಗೆ ಪೂರ್ಣಫಲವಿತ್ತು ಸಮನೆಂದೆನಿಸಿರುವೆ ಕರ್ಮಮೋಚಕ ನೀನೆ ಸಕಲ ಕರ್ಮಪ್ರದನೆಂದೆನಿಸಿ ಪೂರ್ವ- ಕರ್ಮಫಲ ಭೋಗಿಸಲು ಜನ್ಮವನಿತ್ತು ಕರ್ಮಪ್ರವಹದೊಳಿಡುವೇ 3 ವಿಮುಖನಾಗಿಹೆ ಶ್ರುತಿಸ್ಮøತಿಶಾಸ್ತ್ರಧರ್ಮಕೆ ಪ್ರಮುಖನಾಗಿಹೆ ದುಷ್ಕರ್ಮ ಮಾರ್ಗದಲ್ಲಿ ಕರ್ಮಕಲಾಪದ ಧರ್ಮ ಮರ್ಮವನರಿಯೆ ಹೆಮ್ಮೆಯಿಂದಲಿ ನಾನಾ ಕರ್ಮಕೂಪದಲಿರುವೆ ಪೆರ್ಮೆಗೋಸುಗ ಅಧರ್ಮವೆಷ್ಟೋ ಮಾಡ್ದೆ ಒಮ್ಮೆಗಾದರು ಸದ್ಧರ್ಮಾಚರಿಸಲಿಲ್ಲ ಕರ್ಮ ಅಕರ್ಮ ವಿಕರ್ಮ ಪರಿಚಯವಿಲ್ಲ ಜನ್ಮಕೆ ಧರ್ಮಪುತ್ರನೆ ದ್ವಂದ್ವಕರ್ಮಸಮರ್ಪಿಸಲು ಸನ್ಮತಿಯ ಕೊಟ್ಟಿನ್ನು 4 ಬೆಟ್ಟದೊಡೆಯನೆ ಶ್ರೀ ವೇಂಕಟೇಶ ನೀ ತುಷ್ಟಿಯಾದರೆ ನಿನ್ನಿಷ್ಟದಂತೆ ಫಲವು ಸೃಷ್ಟಿಯೊಳು ಪುಟ್ಟಿಸಿ ದುಷ್ಟಕರ್ಮದ ಪಾಶ ಕಟ್ಟಿನೊಳಿಟ್ಟೆನ್ನ ಕಷ್ಟಪಡಿಸುವರೇ ಸೃಷ್ಟೀಶ ಉರಗಾದ್ರಿವಾಸ ವಿಠಲ ಎನ್ನ ನೀನಿಟ್ಟಿರುವಷ್ಟುಕಾಲ ಧಿಟ್ಟಭಕುತಿಯ ಕೊಟ್ಟು ದಿಟ್ಟ ರಕ್ಷಿಸು ಇಷ್ಟಮೂರುತಿಯೆ ಇಷ್ಟದಾಯಕನೆಂದು ನಾನಿಷ್ಟು ನುಡಿದೆನೋ ನಿನ್ನ ಎನ್ನ ಮನೋಭೀಷ್ಟೆ ಸಲಿಸೆ ನಿನ್ನಿಷ್ಟವಯ್ಯ5
--------------
ಉರಗಾದ್ರಿವಾಸವಿಠಲದಾಸರು
ವಸುಮತೀಶ ವಿಠ್ಠಲನೇ ನೀನಿವಗೆ | ಎಸೆವ ಜ್ಞಾನವನಿತ್ತುಹಸನಾಗಿ ಕಾಪಾಡಬೇಕೊ ಹರಿಯೆ ಪ ಕುಸುಮ ಸಂಭವ ಪಿತನೆ | ವಾಸುದೇವನೆ ಕೃಷ್ಣನಸು ನಗೆಯಲೀ ನಿನ್ನ ಉಪಾಸನವ ಕೊಡೊ ಹರಿಯೆ ಅ.ಪ. ತರತಮವು ಪಂಚಭೇದದ ಜ್ಞಾನ | ನಿರತಿಶಯ ಹರಿಭಕ್ತಿಗುರುಭಕ್ತಿಗಳ ಕರುಣಿಸೀ ಕಾಪಾಡಬೇಕೊ ಹರಿಯೇ |ವರ ಪ್ರದಾಯಕ ಸ್ವಾಮಿ ವೈರಾಗ್ಯ ಭಾಗ್ಯಗಳ ನೀನಿವರಿಗಿತ್ತುಕರುಣದಿಂ ಕಾಪಾಡಬೇಕೊ ಹರಿಯೇ 1 ನಿನ್ನ ಮೊರೆ ಹೊಕ್ಕವನ | ಇನ್ನು ಕೈ ಪಿಡಿಯುವುದುನಿನ್ನ ಧರ್ಮವಲ್ಲವೆ ಸ್ವಾಮಿ ರಾಮಚಂದ್ರ |ನನ್ನೆಯಿಂದಲಿ ಇವನ ಪಾಪಗಳ ಪರಿಹರಿಸಿನಿನ್ನ ಪದ ಸೇವಕನ ಮಾಡೊ ವೈಕುಂಠ ಪತಿಯೇ 2 ಖಗವರಧ್ವಜ ದೇವ ಜಗಜ್ಜನ್ಮಾದಿ ಕಾರಣನೆಬಗೆಬಗೆಯ ಮಹಿಮೆಗಳ ತೋರಿ ಕಾಪಾಡೊ ಹರಿಯೇ |ಸುಗುಣ ಮೂರುತಿ ದೇವ ತ್ರಿಗುಣ ವರ್ಜಿತ ಸ್ವಾಮಿಹಗರಣಗಳೀಯದಲೆ ಕಾಪಾಡೊ ಹರಿಯೇ 3 ಇಷ್ಟಮೂರುತಿ ದೇವ ಸೃಷ್ಟ್ಯಾದಿ ಕಾರ್ಯಗಳದೃಷ್ಟಿಯಿಂದಲಿ ಮಾಳ್ಪ ಮಹಮಹಿಮ ಹರಿಯೇ |ಕೃಷ್ಣಮೂರುತಿ ಹೃದಯ ಅಷ್ಟದಳ ಮಧ್ಯದಲಿದೃಷ್ಟಿಗೋಚರನಾಗಿ ಕಾಪಾಡೊ ಹರಿಯೇ 4 ಮೂರ್ತಿ ಹಯ ಮೊಗಾತ್ಮಕನೇ |ವೇದಾಣಿ ವಂದ್ಯ ಗುರುಗೋವಿಂದ ವಿಠ್ಠಲನೇನೀ ದಯದಿ ಕೈ ಪಿಡಿದು ಕಾಪಾಡೊ ಹರಿಯೇ 5
--------------
ಗುರುಗೋವಿಂದವಿಠಲರು
ಶ್ರೀಹರಿ ಪ್ರಿಯ ವಿಠಲ | ಸಲಹ ಬೇಕಿವನಾ ಪ ಸ್ನೇಹ ಸದ್ಭಕ್ತರಲಿ | ಸಾಹಸದಿ ಕೊಡಿಸಿ ಅ.ಪ. ಪಾಪಾಟವಿಗೆ ಪವಿಯು | ಶ್ರೀಪತಿಯ ನಾಮವನುಲೇಪಿಸುವುದೋ ಸ್ವಾಮಿ | ಗೋಪಾಲ ಮೂರ್ತೇವ್ಯಾಪಕನು ನೀನಾಗಿ | ಪ್ರಾಪಕಾಭಿಷ್ಟಗಳಪಾವನಕೆ ಮನ ಮಾಡಿ | ಎರ್ಷಿಸೋ ಹರಿಯೇ 1 ಸೃಷ್ಟಾದಿಕರ್ತನೇ | ಕೃಷ್ಣ ಮೂರುತಿ ದೇವಕಷ್ಟಗಳ ಪರಿಹರಿಸಿ | ಕಾಪಾಡೊ ಹರಿಯೆಇಷ್ಟಮೂರುತಿ ದೇವ | ಸುಷ್ಠು ಭಜನೆಯ ನೀಡಿಹೃಷ್ಟನ್ನ ಮಾಡಿವನ | ಜಿಷ್ಣು ಸಖ ಹರಿಯೆ 2 ಪಂಚಭೇದ ಜ್ಞಾನ | ಸಂಚಿಂತನೆಯ ಕೊಟ್ಟುವಾಂಚಿತಾರ್ಥದನಾಗೊ | ಪಂಚ ಪಾಂಚಾತ್ಮಕಾಂಚನವು ಲೋಪ್ಠವು | ಸಮವೆಂಬ ಮತಿಯಿತ್ತುಅಂಚೆ ವಹ ಸದ್ವಂದ್ಯ | ಮಿಂಚಿ ನಂದದಿ ಪೊಳೆದು 3 ಭವ ಬಂಧದಲಿ ಸಿಲ್ಕಿ | ಬಲು ನೊಂದಿಹನು ಅಯ್ಯಭವರೋಗ ವೈದ್ಯನೇ | ಕೈ ಪಿಡಿದು ಕಾಯೋ ಅವನಿಯೊಳು ಶ್ರೀ ಹರಿಯೆ ಪ್ರಿಯನಾಗಿ ಮೆರೆಯಲಿಂ-ದಿವನ ಸ್ವಪದಿ ಪೇಳ್ದೆ | ಗುರು ಮೂರ್ತಿಯಾಗೀ 4 ಸುಪ್ತೀಶ ಪೇಳ್ದಪರಿ | ಇತ್ತಿಹೆನೊ ಅಂಕಿತವಆಪ್ತ ನೀನಿದ್ದವಗೆ | ದಾಸ್ಯ ಸದ್ಧರ್ಮಪ್ರಾಪ್ತಿ ಗೈಸುತ ಭವವ | ಉತ್ತರಿಸ ಬೇಕೆಂದುಗೋಪ್ತ ಗುರು ಗೋವಿಂದ | ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಸತಿ ಸಹಿತ ಕಶ್ಯಪರು ರತುನದಾರತಿ ಪಿಡಿದು ರತಿಪತಿಪಿತನಿಗೆ ಅತಿಹರುಷದಿ ಅತಿಶಯದ ಮಹಿಮೆಗಳ ಪೊಗಳುತಲಿ ಶ್ರೀಹರಿಗೆ ಕುಶಲದಾರತಿ ಎತ್ತಿಬೆಳಗಿದರು ನಿತ್ಯ ಶುಭ ಮಂಗಳಂ 1 ಅನಸೂಯ ಸಹಿತ ಅತ್ರಿಯರು ಬೇಗನೆ ಬಂದು ನಳಿನಾಕ್ಷನ ಚರಣಕ್ಕೆರಗಿ ನಿಂದು ವಿಧವಿಧದ ಆಟಗಳ ಆಡಿದ ಶ್ರೀಹರಿಗೆ ಪದುಮದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 2 ಶೀಲವತಿಯಾದ ಸುಶೀಲೆ ಸಹಿತ ಭಾರದ್ವಾಜ ಋಷಿಗಳು ತಮ್ಮ ಆಶ್ರಮದಲಿ ಶ್ರೀಲಕುಮಿವಲ್ಲಭಗೆ ಶೀಘ್ರದಿಂದಲಿ ತಾವು ಗೋಮೇಧಿಕದಾರುತಿ ಬೆಳಗಿದರು ನಿತ್ಯ ಶುಭಮಂಗಳಂ 3 ಕುಮುದ್ವತಿ ಸಹಿತ ವಿಶ್ವಾಮಿತ್ರ ಋಷಿಗಳು ಕನಕ ಮಂಟಪದಿ ಮೆರೆಯುವ ದೇವಗೆ ಸನಕಾದಿವಂದ್ಯನಿಗೆ ವನಜಾಕ್ಷಿಯರಸನಿಗೆ ಕನಕದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 4 ಪ್ರಹ್ಲಾದವರದನಿಗೆ ಅಹಲ್ಯೆಯ ಸಹಿತದಿ ಫುಲ್ಲಲೋಚನಪ್ರಿಯಗೆ ಋಷಿಗೌತಮ ಮಲ್ಲಿಗೆಹಾರಗಳು ಧರಿಸಿ ಶೋಭಿಪ ಹರಿಗೆ ಚಲ್ವನವರತ್ನದಾರತಿ ಎತ್ತುತಾ ನಿತ್ಯ ಶುಭಮಂಗಳಂ 5 ರೇಣುಕಾ ಸಹಿತ ಜಗದಗ್ನಿ ಋಷಿಗಳು ತಮ್ಮ ಧ್ಯಾನಗೋಚರನಾದ ಪರಮಾತ್ಮನ ಮಾನಿನಿಮಣಿ ಲಕುಮಿಯೊಡನೆ ಶ್ರೀಕೃಷ್ಣನಿಗೆ ನೀಲಮಾಣಿಕ್ಯದ ಆರತಿ ಎತ್ತುತ ನಿತ್ಯ ಶುಭಮಂಗಳಂ 6 ಸತಿ ಸಹಿತ ವಶಿಷ್ಠ ಋಷಿಗಳು ಇಷ್ಟಮೂರುತಿಯಾದ ವರಕಮಲನಾಭ ವಿಠ್ಠಲನ ಸ್ಮರಿಸುತ ನಿತ್ಯ ನವರತ್ನದಾರತಿ ಬೆಳಗಿದರು ನಿತ್ಯ ಶುಭಮಂಗಳಂ 7 ಮಂಗಳಂ ಸಪ್ತಋಷಿಗಳು ಪರ್ಣಶಾಲೆಯೊಳು ಗಾಂಗೇಯನುತನ ಪೂಜಿಸಿ ಹರುಷದಿ ಸಂಗೀತಲೋಲನಿಗೆ ಶೃಂಗಾರ ಪುರುಷನಿಗೆ ರಂಗಿನಾರತಿಯೆತ್ತಿ ಬೆಳಗಿದರು ನಿತ್ಯ ಶುಭಮಂಗಳಂ 8
--------------
ನಿಡಗುರುಕಿ ಜೀವೂಬಾಯಿ