ಪರಮ ಸಾಹಸವಂತ ಧೀಮಂತ ಹನುಮಂತ ಪ
ಸರಸರನೆ ತಾ ಬೆಳೆದ ತಾ ಮುಗಿಲ ಪರ್ಯಂತ ಅ.ಪ.
ಇಳೆಯಿಂದ ನಭವ ಪರಿಯಂತವೇಕಾಕೃತಿಯು
ಬೆಳಗುತಿರೆ ನೋಡಲತಿ ಚೋದ್ಯವು
ವಿಲಸಿತದ ವಿಂಧ್ಯಗಿರಿಯಂತೆ ಶೋಭಿಸಿತು
ಫಲಗುಣಾಗ್ರಜ ನೋಡಿ ಬೆÉರಗಾಗುತಿರಲು 1
ಪಿಂಗಾಕ್ಷಿಗಳು ದಿಕ್ತಟಂಗಳನು ಬೆಳಗುತ್ತ
ಕಂಗೊಳಿಸುತಿರ್ದುದಾ ಸಮಯದಿ
ಶೃಂಗಾರ ಕಾಂತಿಯಿಂ ತುಂಗವಿಕ್ರಮನ ಉ
ತ್ತುಂಗ ದೇಹವು ದಿವ್ಯರಂಗು ಒಡೆದೆಸೆಯೆ 2
ಶರಧಿಶತಯೋಜನ ನೆರೆದಾಂಟಿದಾ ದೇಹ
ಅರಿಭಯಂಕರ ದೇಹ ಗುರುತರದ ದೇಹ
ಕರಿಗಿರೀಶನ ಚರಣ ಸರಸೀರುಹ ದ್ವಂದ್ವ
ಪರಿಚರ್ಯಕ್ಕನುವಾದ ಪರಮದೇಹವಿದೆನಲು 3