ಎಷ್ಟು ಮಾತ್ರ ನಿಂದಲ್ಲದ್ದು ಹರಿ
ಸೃಷ್ಟಿಯೊಳಗೆ ಎನ್ನ ಹುಟ್ಟಿಸಿದ್ದು ಪ
ನಷ್ಟದೇಹ ಕೊಟ್ಟು ದುಷ್ಟ ಬವಣೆಯಿಂದ
ಕಷ್ಟದೊಳಗೆ ಎನ್ನ ನೂಕಿದ್ದುಅ.ಪ
ಉಳಿದ ಪಾಪಶೇಷ ಕಳೆಯದಲೆ ಎನ್ನ
ಇಳೆಯವಾಸಕ್ಯಾಕೆಳೆಸಿದಲೇ
ನಳಿನನಾಭ ನಿನ್ನ ಬಳಿ ಇದೆ ನ್ಯಾಯವೆ
ಕಳವಳಪಡಲು ನಾನೊಳಿತೇನು ನಿನಗೆ 1
ಎಷ್ಟು ರೀತಿ ಕಷ್ಟ ತಡಿಬೇಕೊ ಇ
ನ್ನೆಷ್ಟುದಿನ ಹೀಗೆ ಕಳೀಬೇಕೊ
ಕರ್ಮ ಎನ್ನದಿರಲಿಕ್ಕಾಗಿನು
ಶಿಷ್ಟಜನುಮ ಮತ್ತು ಕೊಟ್ಟ್ಯಾಕೊ 2
ಭಕ್ತವತ್ಸಲನೆಂಬ ಬಿರುದೇನೋ ನಿನ್ನ
ಭಕ್ತರ ಅಭಿಮಾನ ತೊರೆದೇನೊ
ಭಕ್ತರಿಗೀತೆರ ಮೃತ್ಯುಬಾಧೆಯೇನು
ಮುಕ್ತಿದಾಯಕ ಜಗತ್ಕರ್ತ ಶ್ರೀರಾಮನೆ 3