ಬೇಡುವುದಿಲ್ಲನ್ಯ ನಾನೇನು ನಿನ್ನ
ನೋಡಿ ಕರುಣದಿ ಬಾರೋ ಭಜಕನ ತ್ರಾಣ ಪ
ಬೇಡುತಕ್ಕುದನೆ ನಾ ಬೇಡುವೆನೆಲೆ ಸ್ವಾಮಿ
ನೀಡುತಕ್ಕುದನೆ ನೀ ನೀಡಿ ಕಾಪಾಡಯ್ಯ
ಮೃಡಮಿತ್ರ ಜಡಜಾಕ್ಷ ಒಡೆಯ ವೈಕುಂಠ ಅ.ಪ
ಎನ್ನಮನೆ ಬಾಗಿಲವ ಕಾಯೆನ್ನದಿಲ್ಲ
ಎನ್ನುಳಿಸು ತಂದೆಯನು ತರಿದೆನ್ನದಿಲ್ಲ
ಅಣ್ಣನ್ನ ಕೊಲ್ಲಿರಾಜ್ಯಕೊಡು ಎನ್ನದಿಲ್ಲ
ಎನ್ನ ಮನೆಯಾಳಾಗಿ ದುಡಿಯೆನ್ನದಿಲ್ಲ
ನಿನ್ನ ದಾಸರ ಸಂಗವನ್ನು ಕರುಣಿಸಿ
ಎನ್ನನನ್ಯರಿಗೆ ಬಾಗಿಸೆ ಮನ್ನಿಸಿ ಸಲಹೆಂಬೆ
ಭಿನ್ನವೇನಿದರೊಳು ಉನ್ನತಮಹಿಮ 1
ಲಲನೆಯಳ ಕೊಡಿಸಣ್ಣನ್ಹೊಡಿದೆನ್ನದಿಲ್ಲ
ಬಲವಾಗೆನ್ನಯ್ಯ ಬಂಧುಗಳ ನಾಶಕೆನ್ನೊದಿಲ್ಲ
ಬಲಿದೆನ್ನಿಂ ತವ ಭಕ್ತ ನೋಡಿಸೆನ್ನದಿಲ್ಲ
ಸುಲಭದೆನ್ನಿಂದ್ಹೆಡಮುರಿ ಕಟ್ಟಿಸಿಕ್ಕೆನ್ನದಿಲ್ಲ
ಎಲೆದೇವ ತವಪಾದನಳಿನ ನಿರ್ಮಲಧ್ಯಾನ
ನಿಲಿಸು ಸ್ಥಿರವಾಗೆನ್ನ ನಾಲಗೆಯೊಳನುದಿನ
ಇಳೆಭೋಗದಳಸದೆ ಸಲೆ ಸುಖದಿ ಸಲಹೆಂಬೆ 2
ಭಿನ್ನವಿಲ್ಲದೆ ಬಾ ನೀ ಕರೆದಲ್ಲಿಗೆನೆನು
ಎನ್ನ ಹೊಡೆತದ ಪೆಟ್ಟು ಸೈರಿಸೆಂದೆನೆನು
ಉನ್ನತ ಕುಲಗೆಡು ಎನ್ನೊಳುಂಡೆನೆನು
ಅನ್ಯಮಾತೊಂದು ನಿನ್ನ ಬಯಸಿ ಬೇಡೆನು ನಾನು
ಅನ್ಯರನು ಬೇಡದಂತುನ್ನತ ಪದ ನೀಡಿ
ನಿನ್ನ ಮೂರುತಿಯೆನ್ನ ಕಣ್ಣೊಳು ನಿಲ್ಲಿಸಿ
ಬನ್ನಬಡಿಸದೆ ಕಾಯೊ ಎನ್ನಯ ಶ್ರೀರಾಮ 3