ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪ್ಪಾ ಕೇಳೊ ನಿನ್ನ ಗುರುತ ನೀನೆ ತಪ್ಪಿದೆಪ್ಪ | ತುಪ್ಪ ಹಾಲು ಬಿಟ್ಟು ನೀ ಅಡವಿಯ ಸೊಪ್ಪು ಮೆಲಬ್ಯಾಡಪ್ಪ ಪ ಅನುದಿನ ನೆನೆದು ಮಾಡುವ ಕರ್ಮವು ನಿನಗಿಲ್ಲಪ್ಪ | ಚಿನುಮಯಾತ್ಮಕ ಬ್ರಹ್ಮನು ನೀನು ಅನುಮಾನ ಇದಕಿಲ್ಲಪ್ಪ 1 ನಿತ್ಯ ಬೋಧಾಮೃತವ ಕುಡಿಯಪ್ಪ | ನಾದ ಬಿಂದು ಕಲಾತೀತರು ಹಾಡುವ ಪದವ್ಯಾಕಪ್ಪ | ಸಾಧು ಪುರುಷರು ಹೋದ ಹಾದಿಯ ಹಿಡಿದು ಮುಕ್ತಿ ಪಡೆಯಪ್ಪ 2 ಇಂದು ನಾಳೆ ಎಂಬುವದೊಂದು ಸಂಶಯ ನಿನಗೆ ಬ್ಯಾಡಪ್ಪ | ಕುಂದು ಕೊರತೆಯು ಇಲ್ಲಾತನಿಗೆ ಆನಂದವೆ ಸ್ವಾದವಪ್ಪ | ಬಂದು ಹೋಗಿ ನೀ ಭವಸಾಗರದೊಳು ಬಹು ಪರಿಯಿಂದಲಿ ನೊಂದೆಪ್ಪ | ತಂದೆಯಾದ ಭವತಾರಕನ ಹೊಂದಿ ದಿನವ ಕಳೆಯಪ್ಪ 3
--------------
ಭಾವತರಕರು
ಇದೇ ನೋಡಿರೋ ಸಂಧ್ಯಾನ ಸದಾ ಆತ್ಮಾನುಸಂಧಾನ ಧ್ರುವ ತಿಳಿಯದೆನಗೆ ತ್ರಿಕಾಲಾ ಹೊಳವುತಿಹ್ಯದು ಸೂರ್ಯಅಚಲಾ ಇಳೆಯೊಳಾಯಿತು ಧರ್ಮಾನುಕೂಲ 1 ಚಂಚಲೆಂಬುದೆ ಅಚಮನ ಮುಂಚೆ ಸಂಧ್ಯಾನಕಿದೆ ಸಾಧನ ವಂಚÀನಿಲ್ಲದಾಯಿತು ಅಘ್ರ್ಯದಾನಾ 2 ಪರಮೇಷ್ಠಿ ಪರಬ್ರಹ್ಮಋಷಿಃ ಅರಿತು ಪ್ರಣಮ್ಯ ಸಾಧಿಸಿ ತಿರುಗಿನೋಡಿಘನ ಸ್ಮರಿಸಿ ಕರಿಗಿ ಹೋಯಿತು ಪಾಪದ ರಾಶಿ 3 ಆ ಹಪವೆ ಗಾಯತ್ರಿಮಂತ್ರ ಬೀಜಾಕ್ಷರವಿದು ಪವಿತ್ರ ರಾಜಿಸುತಿಹ್ಯದು ಸರ್ವಾಂತರಾ ನಿಜಗುಹ್ಯ ಋಷಿಮುನಿಗೋತ್ರ 4 ಸದೋದಿತ ಗುರುಭೋಧಪೂರ್ಣ ಇದಕಿಲ್ಲ ಉದಯಾಸ್ತಮಾನ ಇದೇ ಮಹಿಪತಿ ಸಂಧ್ಯಾನ ಸದಾ ನಿತ್ಯಾನುಂಸಂಧಾನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾಪೇಂದ್ರಿಯಗಳಿಗೆರಗಿ ಪರಹಿತಾರ್ಥವ ಮರೆದು ವ್ಯಾಪಾರ ವಿಷಯಂಗಳಲ್ಲಿರೆ ಯಮನೊಯ್ದು ಕೋಪಾಟೋಪದಲಿಂದ ದಂಡಿಸಿ ತಮಸಿನ ಕೂಪದಲ್ಲಿ ಹಾಕದಲೆ ಬಿಡುವನೆ ಮರುಳೆ ಪ ಉಡಿಗೆ ತೊಡಿಗೆ ಇಡಲು ಮಡದಿಯಳ ಮುಖ ನೋಡಿ ಕಡು ಹಿಗ್ಗಿ ಹುಗ್ಗಿ ಪಡಗದಂತೆ ಹಿರ್ರನೆ ಪಿಡಿದು ಗಲ್ಲವ ಮುಟ್ಟಿ ಮುಡಿಗೆ ಮುಡಿವಾಳವನು ತಡಿಯದಲೆ ಮುಡಿಸುತ್ತಲಿ ಕಕ್ಕಸ ಕುಚ ವಡನೊಡನೆ ನೋಡಿ ಸುಖಬಡುತಾ ಬಿಡದೆ ಕಾಳ್ಯಾಡುವುದು ಸುಡುಸುಡು ಮಾಡಿದರಿನ್ನಾವ ಗತಿ ಮರುಳೇ 1 ನೆಂಟರು ಮನೆಗೆ ಬರಲು ವಂಟಿಯಂತೆ ಮೊಗವ ಸೊಂಟ ಮಾಡಿಕೊಂಡು ಕಂಠವನು ತರ್ಕೈಸಿ ಕುಂಟವಾರ್ತೆಯ ಕೇಳಿ ಬಂಟನು ನಾನೆಂದು ತೊಂಟತನ ಬಗೆ ತೋರುತಾ ಉಂಟಾದ ಗೋಧಿಯ ಸೊಂಟೆ ಬೆಲ್ಲನು ತಂದು ಹೆಂಟಿಯಂತೆ ಹದಿನೆಂಟು ಕಡುಬನೆ ಕೊರಿಸಿ ವಂಟಿಲಿ ಕುಳಿತು ಸುಂಡಿಗೆಯನ್ನು ಚಾಚುತ್ತಾ ಎಂಟು ಮಡಿಸದೆ ವಾರ್ತಿ ಪೇಳುತಲಿ ಮರುಳೇ 2 ಇಂದು ನಮ್ಮನೆ ಪ್ರಸ್ತÀವೆಂದು ಆರಾದರೂ ಬಂದು ಪೇಳಲು ಊರ ಹಂದಿಯಂತೆ ಕಾಯಿದು ಒಂದು ಕಾಳು ತಿನದೆ ಸಂದಿಗೊಂದಿ ಸುತ್ತಿ ಸಂಧ್ಯಾಕಾಲ ವಾನರಾಗುತ್ತ ಚಂದದಿಂದ್ಯುಕ್ತಿಯೊಳು ದ್ವಂದ್ವದಲಿ ಕುಳಿತಿವರು ತಂದೆ ತಾಯಿ ಕಡೆ ಬಂಧುಬಳಗವೆಂದೂ ಒಂದಿಷ್ಟು ಕಡಿಮೆ ತಿನ್ನದೆ ಪರರ ಒಡವೆಯನು ತಿಂದು ಡರ್ರನೆ ತೇಗಿ ನಸುವ ನಗುವ ಮರುಳೇ3 ನಾಡಾಡಿ ಚಾಡಿ ಮಾತಾಡಬೇಕಾದರೆ ಖೋಡಿ ನಾಲಿಗೆ ದೊಡತಾಗಿ ಬಾಹಿನೀ ನಿಡಿ ಲಟಲಟವೆನುತಾ ಕೋಡಗದಂತೆ ಕುಳಿತು ಹೇಡಿ ಪರನಿಂದೆಗಳಿಗೆ ಬಾಡದಲೆ ಬತ್ತದಲೆ ಮಾಡಿದ ಮಹಾಪುಣ್ಯ ಕಾಡಿಗೊಪ್ಪಿಸಿ ಕೊಟ್ಟ ಮೂಢ ಗಾರ್ಧಬನಂತೆ ಓಡಾಡಿ ಬಳಲಿ ನಾಡಾಡಿ ಸುದ್ದಿಗಳಿಗೆ ಬಿಡಿ ಬಿಡಿಂದಾ ತಿರುಗುವಾ ಹೀನ ಮರುಳೇ 4 ಸಂಸಾರವೆಂಬಾ ಸಾರಾ ಸಾಗರ ಮಧ್ಯ ಹಿಂಸನಾಗದೆ ಬಿಟ್ಟು ಇದರಂತೆ ಭಕುತಿ ಮರು ದಂಶ ಗುರು ಮಧ್ವಮುನಿರನ್ನನಾ ಶ್ರೀ ಚರಣ ಸಂಶಯವಿಲ್ಲದಲೆ ನಂಬಿ ಸಂಸಾರ ಉತ್ತರಿಸು ಸಂದೇಹ ಇದಕಿಲ್ಲ ಕಂಸಾಸುರನ ಪ್ರಾಣಹರ ಎನ್ನ ಮನಸ್ಸಾ ಹಂಸ ಶ್ರೀ ವಿಜಯವಿಠ್ಠಲನ್ನ ಪಾದದಾ ಪಾಂಶವೊ ಮಾಡಿ ಗತಿಯಲಿ ಬಾಳು ಮರುಳೇ5
--------------
ವಿಜಯದಾಸ
ಬಿಚ್ಚದಿರು.ಬಿಚ್ಚದಿರು ಮುಚ್ಚು ಈ ಬಾಯಿ ಬಿಚ್ಚಿದ ಬಳಿಕದಕೆ ಎಚ್ಚರವೆ ಇಲ್ಲ ಪ ಅಲ್ಲ ಅಹುದೆಂಬುವುದು ಎಳ್ಳಷ್ಟು ಇದಕಿಲ್ಲ ಸುಳ್ಳುಹೇಳುವುದೆಲೊ ಅಳತೆಯೆ ಇಲ್ಲ ಜೊಳ್ಳು ಮಾತುಗಳ್ಹೇಳಿ ಮಳ್ಳು ಮಾಡಿ ಜನರಲ್ಲಿ ಬಲ್ಲವೆನಿಸಿಕೊಂಬ ಸೊಲ್ಲೆ ಹುಡುಕುವುದು 1 ಸಲ್ಲದೀ ಆತ್ಮದ ಇಲ್ಲದ ಸುದ್ದಿಯನು ಎಲ್ಲಿತನಕಲು ಬೇಸರಿಲ್ಲದ್ಹೇಳುವುದು ಅಲ್ಲ ಅಹುದೆಂಬುದನು ಎಲ್ಲಬಲ್ಲಂಥ ಸಿರಿ ನಲ್ಲನ ಪಾದಕ್ಕೆ ಅಲ್ಲೆನಿಸುತಿಹ್ಯದು 2 ಮುಚ್ಚುಮರೆಯಿದಕಿಲ್ಲ ಎಚ್ಚರಮೊದಲಿಲ್ಲ ಕಿಚ್ಚಿನೋಳ್ಬಿದ್ಹೋಗ್ವ ನೆಚ್ಚಿಕಿಲ್ಲ ಕಾಯ ಅಚ್ಯುತ ಶ್ರೀರಾಮನಂ ಮುಚ್ಚಿಭಜಿಸಿ ಭವದುರುಲು ಬಿಚ್ಚಿಸಿಕೊಳ್ಳೊ 3
--------------
ರಾಮದಾಸರು
ಸಾಧಿಸಿದೇ ನೋಡಿ ಪೂರ್ಣ ಆದಿ ತತ್ವದ ಸುಸ್ಥಾನ ಭೇದಿಸುವದನುದಿನ ಸದಾನಂದ ಗುರುಜ್ಞಾನ ಧ್ರುವ ಮಾತಿನಂತಲ್ಲವಿದು ಸ್ವಾತ್ಮಸುಖದ ಸಾಧನ ಶ್ರುತಿಗಗೋಚರ ನೋಡಿ ಪ್ರತ್ಯೇಕದನುಸಂಧಾನ ಅತಿಗುಹ್ಯಗೂಢವಿದು ಹಿತೋಪಾಯದ ಖೂನ ರತಿಗೊಟ್ಟುನೋಡಿ ಪ್ರತ್ಯಕ್ಷ ಇಹ್ಯ ನಿಧಾನ 1 ನಡಿನೋಟ ನೀಟಮಾಡಿ ಪಡಕೊಳ್ಳದೆ ಸ್ವಹಿತ ನುಡಿಆಟದೋರಬ್ಯಾಡಿ ಕೂಡಿ ಸುಜ್ಞಾನÀಸನ್ಮತ ಬಡಬ್ಯಾಡಿ ನಾನಾಶ್ರಮವಿಡಿಯದೆ ಸುಗಮ ತಾ ಇಡಿದು ತುಂಬೇದ ಸಾಂದ್ರ ನೋಡಿ ಅನಂದೋಭರಿತ 2 ಸಾಧನಕಿದೇ ಮುಖ್ಯ ಸಾಧಿಸಿದೆ ಗುರುದಯ ಇದಕಿಲ್ಲ್ಲಿನ್ನೊಂದಧಿಕ ಬುಧಜನರ ಉಪಾಯ ಅದರಿಂದೊಲುವ ತಾನು ಸದ್ಗುರು ಭಾನುಕೋಟ್ಯುದಯ ಸದ್ಗೈಸಿ ಮಹಿಪತಿಯ ಸದೋದಿತ ಉದಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಲ್ಲುಸಕ್ಕರೆ ಕೊಳ್ಳಿರೊ - ನೀವೆಲ್ಲರು |ಕಲ್ಲುಸಕ್ಕರೆ ಕೊಳ್ಳಿರೊ ಪ.ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು |ಫುಲ್ಲನಾಭಕೃಷ್ಣನ ದಿವ್ಯನಾಮವೆಂಬಅ.ಪಎತ್ತ ಹೇರುವುದಲ್ಲ ಹೊತ್ತು ಮಾರುವುದಲ್ಲ |ಒತ್ತೊತ್ತಿ ಗೋಣಿಯ ತುಂಬುವುದಲ್ಲ ||ಎತ್ತ ಹೋದರು ಮತ್ತೆ ಸುಂಕವು ಇದಕಿಲ್ಲ |ಹತ್ತೆಂಟು ಸಾವಿರಕೆ ಬೆಲೆಯಿಲ್ಲದಂತಹ 1ನಷ್ಟಬೀಳುವುದಲ್ಲ ನಾಶವಾಗುವುದಲ್ಲ |ಕಟ್ಟಿ ಇಟ್ಟರೆ ಮತ್ತೆ ಕೆಡುವುದಲ್ಲ ||ಎಷ್ಟು ದಿನವಿಟ್ಟರೂ ಕೆಟ್ಟು ಹೋಗುವುದಲ್ಲ |ಪಟ್ಟಣದೊಳಗೊಂದು ಲಾಭವೆನಿಸುವಂಥ 2ಸಂತೆಪೇಟೆಗೆ ಹೋಗಿ ಶ್ರಮಪಡಿಸುವುದಲ್ಲ |ಎಂತು ಮಾರಿದರದಕಂತವಿಲ್ಲ ||ಸಂತತ ಪುರಂದರವಿಠಲನ ನಾಮವ |ಎಂತು ನೆನೆಯಲು ಪಾಪ ಪರಿಹಾರವಲ್ಲದೆ 3
--------------
ಪುರಂದರದಾಸರು