ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರೆದು ತನ್ನಿ ಭರದಿಬನ್ನಿ ಸಿರಿಯನಿದಿರ್ವಂದು ನೀವು ಸಿರಿಯನಿದಿರ್ವಂದು ಭರದಿ ಕರೆದುತನ್ನಿ ಮೋದದಿ ಪ. ಕೋಟಿಸೂರ್ಯಚಂದ್ರರೆನಿತುಂ ಸಾಟಿಯಲ್ಲವೆನಿಸುವ ನೋಟಮಾತ್ರದಿಂದ ಜಗವ ನಾಟ್ಯರಂಗ ವೆನಿಸುವ 1 ಕಡಲ ತನಯೆ ಎನಿಸೆ ಮತ್ತೆ ಕಡಲಮಧ್ಯದಲ್ಲಿ ನೆಲಸಿ ಕಡಲಶಯನನ ಮಡದಿಯಾಗಿ ಬಿಡದೆ ನಮ್ಮ ಪೊರೆವಳ 2 ಶೇಷಶೈಲವಾಸನುರದಿ ವಾಸವಾಗಿ ಶರಣರ ಆಸೆಯನ್ನು ನಲಿಸುತಿರುವ ಭಾಸುರಾನನೆ ಲಕ್ಷ್ಮಿಯ 3
--------------
ನಂಜನಗೂಡು ತಿರುಮಲಾಂಬಾ
ನಂಬಬೇಡ ನಂಬಬೇಡ ನಂಬಲೊಜ್ರ ಕಂಬವಲ್ಲ ಪ ತುಂಬಿದ ಅಸ್ಥಿ ಮಾಂಸ ರಕ್ತ ಜಂಬುಕನ ಬಾಯ ತುತ್ತ ಅ.ಪ ಎಂಬತ್ತನಾಲ್ಕು ಲಕ್ಷ ಕುಂಭದೊಳು ಹೊಕ್ಕು ಬಳಲಿ ನಂಬಲಾರದೊಂದು ಕ್ಷಣಕೆ ಅಂಬರಕ್ಕೆ ಹಾರುವದ 1 ಮಲವು ಬದ್ಧವಾದ ತನು ಮಲೆತು ಇರುವುದೇನು ಬಲುಹುಗುಂದಿದ ಮೇಲೆ ಫಲವಿಲ್ಲವಿದರಿಂದ 2 ಮಾಳಿಗೆ ಮನೆಯ ಬಿಟ್ಟು ಓಗರ ಬಿಟ್ಟು ಜಾಳಿಗೆ ಹೊನ್ನನು ಬಿಟ್ಟು ಜಾರುವುದು ತನುವ ಬಿಟ್ಟು 3 ಆಸೆಯನ್ನು ನೋಡಿ ಮೃತ್ಯು ಮೋಸವನ್ನು ಯೋಚಿಸುವುದು ಸಾಸಿರನಾಮನ ಭಜಿಸಿ ಅನುದಿನ 4 ಮಡದಿ ಮಕ್ಕಳು ಇದನ ಕಡೆಯ ಬಾಗಿಲೊಳಗಿಟ್ಟು ಒಡವೆ ವಸ್ತುಗಳನು ನೋಡಿ ಅಡಗಿಸಿ ಇಡುವರಂತೆ 5 ಈಗಲೋ ಇನ್ನಾವಾಗಲೊ ಭೋಗದಾಸೆ ತೀರಲೊಂದು ಹಾಗಗಳಿಗೆ ನಿಲ್ಲದಯ್ಯ ಈ ಗರುವ ಪರಮಾತ್ಮ 6 ವಾರಕದಾಭರಣವನ್ನು ಕೇರಿಯೊಳು ಕೊಂಬುವರಿಲ್ಲ ವರಾಹತಿಮ್ಮಪ್ಪಗಿಟ್ಟು ವಂದಿಸಿ ಕೈಗಳ ತಟ್ಟು 7
--------------
ವರಹತಿಮ್ಮಪ್ಪ
ಮಧ್ವಮತವ ಪೊಂದದವನ ಭಕುತಿಯಾತಕೆ ಪ ಊಧ್ರ್ವಪುಂಡ್ರ ತಿದ್ದದವನ ಕರ್ಮವ್ಯಾತಕೆಅ.ಪ ದಾನವನ್ನು ಮಾಡದವನ ದ್ರವ್ಯವ್ಯಾತಕೆ | ಸ್ನಾನವನ್ನು ಮಾಡದವನ ಮೌನವ್ಯಾತಕೆ | ಮಾನಿನಿಯು ಇಲ್ಲದವನ ಬದುಕು ಯಾತಕೆ | ಧ್ಯಾನವನ್ನು ಅರಿಯದವನ ಪೂಜೆ ಯಾತಕೆ 1 ವಂಶವನ್ನುದ್ಧರಿಸದಂಥ ಮಗನು ಯಾತಕೆ | ಹಿಂಸೆಯನ್ನು ಪಡಿಸುವಂಥ ಅರಸು ಯಾತಕೆ || ಸಂಸಾರವನು ಒಲ್ಲದಂಥ ಸತಿಯು ಯಾತಕೆ | ಕಂಸಾರಿಯನು ತಿಳಿಯದಂಥ ಜ್ಞಾನವ್ಯಾತಕೆ 2 ಬಂಧು ಬಳಗ ಬಿಟ್ಟು ಉಂಬ ನೆಂಟರ್ಯಾತಕೆ | ಕಂದರನ್ನು ಮಾರುತಿಪ್ಪ ತಂದೆಯಾತಕೆ || ಬಂದ ಅತಿಥಿಗನ್ನವಿಕ್ಕದ ಸದನವ್ಯಾತಕೆ | ನಿಂದೆಗಳು ಮಾಡುತಿಹನಾಚಾರವ್ಯಾತಕೆ 3 ಗುರೂಪದೇಶವಿಲ್ಲದಂಥ ಮಂತ್ರವ್ಯಾತಕೆ | ಹಿರಿಯರನ್ನು ಸಾಕದವನ ಪುಣ್ಯವ್ಯಾತಕೆ || ಚರಿಸಿ ತೀರ್ಥಯಾತ್ರೆ ಮಾಡದ ದೇಹವ್ಯಾತಕೆ | ವರ-ಪ್ರಸಾದವೀಯದಂಥ ದೇವರ್ಯಾತಕೆ4 ಏಕಾದಶಿಯ ಮಾಡದವನ ವ್ರತವು ಯಾತಕೆ | ಏಕಮನಸು ಇಲ್ಲದವನ ನಡತೆ ಯಾತಕೆ || ಸಾಕಿದವನ ಕೊಲ್ಲುವಂಥ ಭಂಟನ್ಯಾತಕೆ | ಲೋಕವಾರ್ತೆ ಬಿಡದವನ ಜಪವು ಯಾತಕೆ 5 ಭಾಷೆ ಬದ್ಧವಿಲ್ಲದವನ ಮಾತು ಯಾತಕೆ | ಕಾಸುವೀಸÀಕೆ ಬಡಿದಾಡುವ ಅನುಜರ್ಯಾತಕೆ || ಲೇಸು ಹೊಲ್ಲೆಹ ನೋಡದಂಥ ಗೆಳೆಯನ್ಯಾತಕೆ | ಆಸೆಯನ್ನು ಬಿಡದ ಸನ್ಯಾಸವ್ಯಾತಕೆ 6 ತಪ್ತ ಮುದ್ರೆಯಿಲ್ಲದವನ ಜನ್ಮವ್ಯಾತಕೆ | ಗುಪ್ತದಲ್ಲಿ ನಡೆಯದಿಪ್ಪ ದಾಸನ್ಯಾತಕೆ || ಆಪ್ತಬಂಧು ವಿಜಯವಿಠ್ಠಲನ ಶ್ರೀ ಚರಣದಿ | ಕ್ಲುಪ್ತ ಮೀರದೆ ನಡೆದ ಮೇಲೆ ನರಕವ್ಯಾತಕೆ 7
--------------
ವಿಜಯದಾಸ