ಪ್ರಾಣಲಿಂಗ ಲಕ್ಷ್ಮಣನ ಮಂಗೀಶಾ ಪುಣ್ಯ
ಸ್ಥಾಣು ಸರ್ವಾತ್ಮಕ ನೀನೆ ಮಂಗೀಶಾ
ಮಾಣದೆನ್ನ ಕೈಪಿಡಿದು ಮಂಗೀಶಾ ಇನ್ಯಾ
ರ್ಕಾಣೆ ನಿನಗೆ ಸಮನಾಗಿ ಮಂಗೀಶಾ ಪ
ಆದಿಗನಾಗಿ ಸಿದ್ಧ ಮಂಗೀಶಾ ನಿನ್ನ
ಶೋಧಿಸಿ ಕಂಡವರುಂಟೆ ಮಂಗೀಶಾ
ವೇದ ಉಪನಿಷದ ನೀನೇ ಮಂಗೀಶಾ ನಿನ್ನ
ಪಾದವ ನೆರೆನಂಬಿರುವೆ ಮಂಗೀಶಾ 1
ರಾಮನ ವಂಶವನೊಲಿದು ಮಂಗೀಶಾ ಬಹು
ಪ್ರೇಮದಿಂದ ಸಲಹಿದಯ್ಯಾ ಮಂಗೀಶಾ
ನಾಮಕ್ಕೆ ಲಕ್ಷ್ಮಣ ಎನ್ನ ಮಂಗೀಶಾ ನೀನೇ
ಸ್ವಾಮಿಯೆಂದು ನಂಬಿದೆನು ಮಂಗೀಶಾ 2
ನಿನ್ನ ಬಲದಿಂದ ಸರ್ವ ಮಂಗೀಶಾ ಸುಖ
ವನ್ನು ಪಡೆದೆನು ನಾನು ಮಂಗೀಶಾ
ಇನ್ನು ನಿನ್ನೊಳು ಕೂಡಿಸಿಕೊ ಮಂಗೀಶಾ ಮುಂದೆ
ಬೆನ್ನನು ರಕ್ಷಿಸಿ ಕಾಯೋ ಮಂಗೀಶ 3
ಯಾರಿಗುಸುರಲಿ ನಾನು ಮಂಗೀಶಾ ಸರ್ವ
ಭಾರಕರ್ತೃ ನೀ ಸಲಹೋ ಮಂಗೀಶಾ
ದಾರಿಯ ತೋರಿಸೋ ಎನಗೆ ಮಂಗೀಶಾ ನಿನ್ನ
ಸೇರಿ ಬದುಕುವೆ ನಾನು ಮಂಗೀಶಾ 4
ಏನೇನರಿಯೆನೆಲೊ ನಾನು ಮಂಗೀಶಾ ನಿನ್ನ
ಧ್ಯಾನಿಸಲೊಂದೆ ಬಲ್ಲೆ ಮಂಗೀಶಾ
ಹಾನಿ ವೃದ್ಧಿನಿನ್ನದು ಶ್ರೀ ಮಂಗೀಶಾ ಎನ್ನ
ಮಾನಾಭಿಮಾನದ ಕರ್ತೃ ಮಂಗೀಶಾ 5
ಅರಿಕೆ ಇಲ್ಲದುಂಟೆ ನಿನಗೆ ಮಂಗೀಶಾ ದುಷ್ಟ
ಅರಿಗಳ ಮಾಯಾಜಾಲವು ಮಂಗೀಶಾ
ಸ್ಮರನ ದಹಿಸಿದಂತೆ ನೀನು ಮಂಗೀಶಾ ಅವರ
ನುರುಹಿ ತೋರೋ ಎನ್ನೊಡೆಯ ಮಂಗೀಶಾ 6
ಬರದು ಬಿನ್ನವಿಸಿದೆ ನಾನು ಮಂಗೀಶಾ ಚಿತ್ತ
ವಿರಲಿ ಅಣುಗನ ಮೇಲೆ ಮಂಗೀಶಾ
ಸ್ಥಿರದಿ ಕುಶಸ್ಥಲವಾಸಿ ಮಂಗೀಶಾ ಶ್ರೀ
ಗುರು ವಿಮಲಾನಂದ ಚೆಲುವ ಮಂಗೀಶಾ 7