ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಣಲೊಲ್ಲೆ ಯಾಕೋ ಅಣ್ಣಯ್ಯ ಉಣದೆ ಹೀಗೇಕೆ ಹಟ ಮಾಡುವಯ್ಯ ಪ ಉಣದಿರೆ ನನ್ನೆದೆ ತಳಮಳಗೊಳುವುದು ತಣಿಸೋ ಮನವನು ಉಂಡು ಕಂದಯ್ಯ ಅ.ಪ ನೀನನುದಿನವೂ ಉಣದಿದ್ದರೂ ಹೀಗೆ ಏನೂ ಹಸಿವಿಲ್ಲದೆ ಆಟವಾಡುವೆ ಹೇಗೆ ಏನಿದರ ಗುಟ್ಟು ಎಲ್ಲೂಟ ಮಾಡುವೆ ನಾನೇನ ಮಾಡಿಹೆನು ಉಣದಿರಲು ಹೀಗೆ 1 ಗೋಪಾಲಿಕೆಯರಲಿ ಆಕಳ ಹಾಲುಂಡು ಗೋಪಾಲಕರ ಕೂಡೆ ಬೆಣ್ಣೆಯ ಕದ್ದುಂಡು ಪಾಪಿಷ್ಠ ಬಲನೊಡನೆ ಮಣ್ಣನಾದರು ತಿಂದು ಅಪಾಟಿ ಹೊಟ್ಟೆಯ ತುಂಬಿಕೊಂಡಿಹೆಯೇನೊ 2 ಪೂತನಿಯ ಮೊಲೆಯುಂಡು ಜಡಗಟ್ಟಿತೊ ಪ್ರೀತಿಯಲಿ ಆ ಗೋಪಿಯರ ದಿಟ್ಟಿ ತಾಕಿತೊ ಆತುಕೊಂಡಾವ ಗೋಪಿಯು ಕೊಟ್ಟಳೆದೆಹಾಲ ಸೋತು ಹೋದೆನಯ್ಯ ನಿನಗುಣಿಸಲಾಗದೆ 3 ಅಣ್ಣಯ್ಯ ಕುಚೇಲ ನೀಡಿದ ಅವಲಕ್ಕಿಯುಂಡು ಕೃಷ್ಣೆ ಕೊಟ್ಟುಳಿದ ಅಗುಳನ್ನವುಂಡು ಚಿಣ್ಣ ಕಡುಭಕ್ತ ವಿದುರನ ಮನೆಯಲಿ ಹಾಲುಂಡು ಸಣ್ಣ ಹೊಟ್ಟೆ ತುಂಬಿತೆ ಕಂದ ಉಣಲೊಲ್ಲೆ ಯಾಕೊ4 ವಸುಧೆಯೊಳಗೆ ದಾಸರು ನಿನ್ನ ಪೂಜಿಸೆ ಏಸು ಪರಿಯಲಿ ನೈವೇದ್ಯ ನೀಡುವರೊ ಬಿಸಿಬಿಸಿ ಪರಮಾನ್ನ ಸಣ್ಣಕ್ಕಿಯೋಗರವು ಹಸಿದ ನಿನಗೆ ಬಲು ಇಷ್ಟವಾಯಿತೆ ಕೃಷ್ಣ 5 ವರಮಹಾಋಷಿಗಳ ವೇದ ಮಂತ್ರಗಳ ಪರಮ ಭಾಗವತರ ಪಲ್ಲಾಂಡುಗಳು ವರಜಾಜಿಪುರಿವಾಸ ನಿನ್ನ ಸೇವಿಸುತಿರಲು ನಿರುತ ಸಂತುಷ್ಟ ನೀ ಚೆನ್ನಕೇಶವನೆ 6
--------------
ನಾರಾಯಣಶರ್ಮರು