ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಾಳಿಗಿಟ್ಟ ದೀಪಕಾಣಿರೋ ಈ ಸಂಸಾರ ಗಾಳಿಗಿಟ್ಟ ದೀಪಕಾಣಿರೋ ಪ ಗಾಳಿಗಿಟ್ಟ ದೀಪಕಾಣಿರೋ ಬೀಳು ಜಗದ ಬಾಳು ಎಲ್ಲ ನೀಲಶಾಮನ ಪಾದನಂಬಿ ಕಾಲನಾಳಿನ ದಾಳಿ ಗೆಲಿಯಿರೋ ಅ.ಪ ಸೂತ್ರಬೊಂಬೆಯಂತೆ ಕುಣಿಯುವ ಈ ದೇಹವೆಂಬ ತುಂಬಿ ತುಳುಕುವ ಆ ಗಾಳಿ ನಿಮಗೆ ಸೂತ್ರಧಾರಿಯ ಭಜಿಸಿ ಭವದ ಯಾತ್ರೆ ಜಯವ ಪೊಂದಿರಯ್ಯ 1 ಮಾಯೆಯಿಂದ ಕಲ್ಪಿಸಿರುವ ಈ ಮಾಯಕಲ್ಪ ಮಾಯೆಯೊಳಗೆ ಲಯಿಸುತಿರುವ ಆ ಮಾಯಗಾರ ಮಾಯದಾಟ ಆಡುತಿರುವ ತಿಳಿರೋ ನಿಜವ ಮಾಯತುಂಬಿ ಮಾಯಬೆಳಗಿ ಮಾಯಜಗವೆನಿಸಿ ತೋರ್ಪ ಮಾಯಮಹಿಮನ ಮರೆಯಬಿದ್ದು ಮಾಯಮೃತ್ಯು ಗೆಲ್ಲಿರಯ್ಯ 2 ವಿಷಮಕನಸಿನಂತೆ ತೋರುವ ಈ ಇಂದ್ರಜಾಲ ಹಸನಗೆಡಿಸಿ ನಿಮಿಷದಡಗುವ ಈ ಹೇಯ ಮಲ ಅಸಮಸುಖಕೆ ಬೆಂಕಿಹಚ್ಚುವ ಪಾಪಕೊಂಡವ ಅಸಮಜ್ಞಾನದಿಂದ ದಾಂಟಿ ವಸುಧೆಗಧಿಕ ಶ್ರೀರಾಮಪಾದ ಕುಸುಮಕ್ಹೊಂದಿ ನಿರ್ಮಲೆನಿಸಿ ಎಸೆವಮೋಕ್ಷ ಪಡೆಯಿರಯ್ಯ 3
--------------
ರಾಮದಾಸರು
ಬಾಲನೇನೆ ನಿನ್ನ ಮಗನು ಗೋ- ಪಾಲಕೃಷ್ಣನು ಪ. ಬಾಲನೇನೆ ನಿನ್ನಮಗನು ಬಾಲಕಿಯರಾಲಯ ಪೊಕ್ಕು ಶೀಲಗೆಡಿಸಿ ಸಾಲದೆ ಗೋ- ಕುಲವನು ಸೂರೆಮಾಡಿದ ಅ.ಪ. ಕಾಲು ಇಲ್ಲದೆ ನಡೆವನೀತ ಮೇಲುಗಿರಿಯ ಬೆನ್ನಲಾಂತ ಮೂಲಬೇರ ಮೆಲ್ಲುವಾತ ಜ್ವಾಲರೂಪಿ ಸ್ಥೂಲಕಾಯ ಬಾಲನಾಗಿ ಭೂಮಿಬೇಡಿದ ಹಾಲು ಕುಡಿಸಿದ ತಾಯ ಎರವು ಮಾಡಿದ ವಲ್ಕಲವನುಟ್ಟು ಅಡವಿ ಆಲಯವ ತಿರುಗಿದ ಶ್ರೀರಾಮಚಂದ್ರ ವೇಲಾಪುರದ ಸೋರುಮುಡಿಯ ಬಾಲೆಯನು ಸೋಲಿಸಿ ಕಾಲದಲ್ಲಿ ಕಲ್ಕ್ಯನಾದ 1 ಮಡುವಿನಲ್ಲಿ ಅಡಗಿಯಿರುವ ಪೊಡವಿ ದೊಡ್ಡನೆತ್ತಿ ಪೊರೆವ ಅಡವಿಯಲ್ಲಿ ಆಡುತಿರುವ ಕಡುಕ್ರೂರ ಹಿಡಿದ ಹಟವ ಹುಡುಗನಾಗಿ ಪೊಡವಿ ಬೇಡಿದ ಕೊಡಲಿ ಪಿಡಿದು ಕಡಿದು ಕ್ಷತ್ರಿಯರ ಕುಲವ ತರಿದನೆ ರಾವಣಾದಿ ಪಡೆಯನೆಲ್ಲ ಸಂಹರಿಸಿದ ಶ್ರೀರಾಮಚಂದ್ರ ತುಡುಗು ಮಾಡಿ ಗಡಿಗೆ ಪಾಲ ಕುಡಿದು ಕಡಹದಲ್ಲಿ ಅಡಗಿ ಬಿಡದೆ ತ್ರಿಪುರವ್ರತಕೆಡಿಸಿ ಪಿಡಿದು ತೇಜಿಯ ನಡೆಸುತಿಹನು 2 ನೀರಪೊಕ್ಕು ವೇದತಂದು ಭಾರಪೊತ್ತು ಬೆನ್ನಲಿಟ್ಟು ಕೋರೆಹಲ್ಲು ತೋರುವ ಕ್ರೂರವದನ ಅಪಾರ ಮಹಿಮ ಪಾದ ಭೂಮಿ ಬೇಡಿದ ವಿಪ್ರರ ಕರೆಸಿ ಧಾರುಣಿಯನೆ ದಾನ ಮಾಡಿದ ಪರ್ವತಗಳ ತರಿಸಿ ಶರಧಿಯನ್ನು ಸೇತುಕಟ್ಟಿದನೆ ಶ್ರೀರಾಮಚಂದ್ರ ಜಾರ ಚೋರ ಮಾರನಯ್ಯ ನಾರೇರಪ್ಪಿ ಮರುಳುಮಾಡಿ ವಾರಿಜಾಕ್ಷ ಹಯವದನ ಏರಿ ಕುದುರೆ ವೈಹಾಳಿಮಾಡಿದ 3
--------------
ವಾದಿರಾಜ