ರಘುವೀರನ ಕಂಡನು ಕಪಿವೀರ ಕಲಿಕಲ್ಮಷದೂರ ಪ
ಅಘವರ್ಜಿತ ಪನ್ನಗಶಯನನೆಂದು
ಬಗೆದು ಮನದಿ ಕರಮುಗಿದನು ದೂರದಿ ಅ.ಪ.
ಶಿರಭಾಗದಿ ಮೆರೆವ ಜಟಾಮಕುಟ | ಚಿಕುರಾಳಿಯಿಂದ
ಪರಿಶೋಭಿಪ ಸುಂದರ ಲಲಾಟ | ಕಮಲಾಕ್ಷಗಳಲಿ
ನಾಸಿಕ ಬಲು ಮಾಟ
ಸ್ಮರಲಾವಣ್ಯ ಧಿಕ್ಕರಿಸುವ ಸುಂದÀರ
ಶರಧಿ ಗಂಭೀರನ 1
ಆಜಾನುಬಾಹುಗಳತಿ ಪ್ರಶಸ್ತ | ಸುರಚಾಪದಂತೆ
ರಾಜಿಪ ಧನುವ ಧರಿಸಿದ ಹಸ್ತ | ವಿಶಾಲ ವಕ್ಷಕೆ
ಈ ಜಗದೊಳಗುಪಮೇಯದೆತ್ತ | ದೋಷನಿರಸ್ತ
ಮೂಜಗದೊಳಗತಿ ಸೋಜಿಗನೆನಿಪ ಸು
ತೇಜದಿ ರಾಜಿಪ ರಾಜಕುಮಾರನ 2
ಸುಂದರ ತ್ರಿವಳಿಗೊಪ್ಪುವ ಉದರ | ನೆರೆ ಗಂಭೀರ
ಚಂದದಿ ಶೋಭಿಪ ನಾಭಿಕುಹರ | ಚೀರಾಂಬರಧರ
ಬಂಧುರ ಕಟಿತಟ ಬಲು ರುಚಿರ | ನೋಳ್ಪರ ಚಿತ್ತಹರ
ಕುಂದಿಲ್ಲದ ಪದದ್ವಂದ್ವ ಸುಶೋಭಿತ
ಸುಂದರಾಂಗ ಶ್ರೀ ಕರಿಗಿರೀಶನ 3