ಈಗುಂಟೋ ಆಗುಂಟೋ ಈ ದೇಹ
ಏಗಬಲ್ಲರು ಯಾರು ಈ ಜಗದ ಗುಂಟ ಪ
ನಾಲ್ಕು ದಿನ ಇರುವಾಗ ಚೆನ್ನಾಗಿ ಇರಬೇಕು
ನಾಲ್ಕಾರು ಜನರಿಗೆ ಉಪಕಾರ ಮಾಡಬೇಕು
ಬಾಲೆ ಸರಸತಿಗೆ ಪರಧನಕೆ ವಸ್ತುವಿಗೆ ಏಕೆ
ಹಾಳು ಮನವನು ನಿಲಿಸಿ ಕೆಡಿಸಬೇಕು 1
ಹಾರುವ ಮನವನ್ನು ಕಟ್ಟಿ ಹಾಕಬೇಕು
ಹಾರುವನ ಕಂಡರೆ ತಡೆಯಬೇಕು
ಹಾರಲೇಕೆ ಪರರ ಒಡವೆ ಕಂಡೊಡನೆಯೆ
ಬಾರಿಬಾರಿಗೆ ಬರಿದೆ ಕೆಣಕಲೇಕೆ 2
ವಿಚಾರಿಸಿಕೋ ದೇವ ಶಿಷ್ಟರ ಭಂಟ ಊರೊಳಗೆ
ಉಚಾಯಿಸುತಿದ್ದಾರೆ ಐದಾರು ಮಂದಿ
ಎಚ್ಚರಿಕೆ ಹಾಕುತ್ತ ಇದ್ದಾರೆ ದುಷ್ಟ ಮಂದಿ
ಎಚ್ಚರಿಸೊ ಉದ್ಧರಿಸೊ ನೆಂಟ ಜಾಜಿಪುರೀಶ3