ಶೋಕವ್ಯಾತಕೆ ಮನವೆ ನಿನಗೆ ಇನ್ನು ಪ.
ಈ ಕುಮಾರಕ ನಿನಗೆ ಗತಿಯ ವಿಧಿಸುವನೇನೊ ಅ.ಪ
ಕೃಷ್ಣ ಸೋದರಮಾವ ಮತ್ತೆ ಭೀಮಸೇನ
ಜೇಷ್ಠ ಪಿತೃ ಪಾರ್ಥಾದಿ ಮಹಧೀರರು
ಇಷ್ಟು ಮಂದಿರಲಾಗಿ ಅಭಿಮನ್ಯು ಪ್ರಾಣವನು
ಬಿಟ್ಟು ಹೋಗಲು ಒಬ್ಬರಾದರುಳುಹಿದರೇನೊ 1
ವಸಿಷ್ಠ ಮುನಿಪರಿಗೆ ನೂರುಮಂದಿ ಸುತರು
ಅಸಮ ಸಾಸಿಗರು ಮಹ ಶೀಲಜ್ಞರು
ಕುಶಲದಿಂದಿರುತಿರ್ದು ಅ-ಕಾಲ ಮೃತ್ಯುವಿನ
ವಶರಾಗಿ ಪೋದರು ನೋಡಿ ಅಚ್ಚರಿಯ2
ಇಂಥವರಿಗೀ ರೀತಿ ನಿನಗಾವ ಸ್ವಾತಂತ್ರ್ಯ
ಸಂತೋಷವನು ತೊಡೋ ಮನಸಿನಲ್ಲಿ
ಕಂತು ಜನಕ ನಮ್ಮ ವಿಜಯವಿಠ್ಠಲನಂಘ್ರಿ
ಸ್ವಾಂತದಲ್ಲಿ ನೆನೆನೆನೆದು ಸುಖಿಯಾಗು ಮನವೆ3