ಶೋಭಾನ | ಶೋಭಾನವೆನ್ನಿರೆ ಸುರರಂಗನಿಯರೆಲ್ಲ
ಶೋಭಾನವೆನ್ನಿ ಶುಭವೆನ್ನಿ ಪ
ಶೃಂಗಾರದ ಗುಣನಿಧಿಯೆ ಬಾ |
ಅಂಗಜಜನಕ ಅರವಿಂದದಾಳಾಕ್ಷನೆ ರಂಗಾ ಬಾ ||
ಭವಭವ ಭಂಗಾ ಬಾ | ದೇವೋತ್ತುಂಗಾ ಬಾ |
ಜಗದಂತರಂಗಾ ಬಾ ಹಸೆಯ ಜಗುಲಿಗೆ1
ಪಂಕಜ ಸಂಭವನಯ್ಯ ಬಾ |
ಕುಂಕುಮಾಂಕಿತನೆ ಭಕುತ ಕುಮುದ ಮೃಗಾಂಕ ಬಾ ||
ನಿಷ್ಕಳಂಕಾ ಬಾ ಶಂಖಚಕ್ರಾಂಕ ಬಾ |
ಅಹಿಪರಿಯಂಕÀ ಬಾ ಹಸೆಯ ಜಗುಲಿಗೆ 2
ಸಾಮಜರಾಜಾ ವರದಾ ಬಾ |
ಸಾಮವಿಲೋಲನೆ ಸದ್ಗುಣ ಶೀಲನೆ ರಾಮಾ ಬಾ ||
ರಣರಂಗಭೀಮಾ ಬಾ ಹಸೆಯಾ ಜಗುಲಿಗೆ 3
ಅಚ್ಯುತ ಉನ್ನತ ಮಹಿಮನೆ ಯಾದವ ಬಾ |
ಘನ್ನ ಮೂರುತಿಯೆ ಸುಪ್ರಸನ್ನಾ ಬಾ ಸಚ್ಚರಿತಾ ಬಾ |
ಭಾಗ್ಯ ಸಂಪನ್ನಾ ಬಾ ಜೀವರ ಭಿನ್ನಾ ಬಾ ಹಸೆಯಾ ಜಗುಲಿಗೆ 4
ನಾರಾಯಣ ದಶರೂಪಾ ಬಾ | ಚಾರುಚರಿತಾ ಪ್ರತಾಪ ಬಾ |
ಶೌರಿ ಮುರಾರಿಯೆ ನಿಟಿಲ ಕಸ್ತೂರಿಯ ಲೇಪಾ ಬಾ ||
ನಿತ್ಯ ಸಲ್ಲಾಪಾ ಬಾ
ನಮ್ಮ ಸಮೀಪ ಬಾ ಹಸೆಯಾ ಜಗುಲಿಗೆ 5
ವಾಸುದೇವ ಮುಕುಂದಾ ಬಾ | ಸಾಸಿರನಾಮ ಗೋವಿಂದಾ ಬಾ |
ಕೇಶವ ಪುರುಷೋತ್ತಮ ನರಸಿಂಹ ಉಪೇಂದ್ರ ಬಾ ||
ಗೋಪಿಕಂದಾ ಬಾ | ಬಹುಬಲ ವೃಂದಾ ಬಾ |
ಅತಿಜವದಿಂದಾ ಬಾ ಹಸೆಯಾ ಜಗುಲಿಗೆ 6
ಪರತತ್ವದಿ ಅತಿ ಚಿಂತಾ ಬಾ | ಪರಬೊಮ್ಮನೆ ಅತಿ ಶಾಂತಾ ಬಾ |
ಪರಮಾತ್ಮನೆ ಪರಿಪೂರ್ಣ ವಿಭೂತಿವಂತಾ ಬಾ ||
ಅಖಿಳ ವೇದಾಂತಾ ಬಾ | ರುಕ್ಮಿಣಿಕಾಂತಾ ಬಾ |
ಸದ್ಗುಣವಂತಾ ಬಾ ಹಸೆಯಾ ಜಗುಲಿಗೆ7
ತ್ರಿದಶಗುಣನುತ ವಿಲಾಸಾ ಬಾ |
ಮಾಧವ ಶ್ರೀಧರನೆ ಸುನಾಸಾ ಬಾ ||
ಸಿರಿಮಂದಹಾಸಾ ಬಾ | ಭಕುತ ಉಲ್ಲಾಸಾ ಬಾ |
ಶ್ರೀ ಶ್ರೀನಿವಾಸಾ ಬಾ ಹಸೆಯಾ ಜಗುಲಿಗೆ8
ಕೃಷ್ಣವೇಣಿಯ ಪಡೆದವನೆ ಬಾ | ರಥ ಹೊಡೆದವನೆ ಬಾ |
ಕೃಷ್ಣೆಯ ಕಷ್ಟವ ನಷ್ಟ ಮಾಡಿದ ಕೃಷ್ಣಾ ಬಾ ||
ಯದುಕುಲ ಶ್ರೇಷ್ಠ ಬಾ | ಸತತ ಸಂತುಷ್ಟ ಬಾ |
ಉಡುಪಿಯ ಕೃಷ್ಣ ಬಾ ಹಸೆಯಾ ಜಗುಲಿಗೆ 9
ಎಲ್ಲರೊಳಗೆ ವ್ಯಾಪಕನೆ ಬಾ ಬಲ್ಲಿದ ದೊರೆಗಳ ಅರಸನೆ ಬಾ |
ನಾ ಎಲ್ಲಿ ನೋಡಲು ಪ್ರತಿಗಾಣೆ ನಿನಗೆ ಸಿರಿನಲ್ಲಾ ಬಾ ||
ಅಪ್ರತಿಮಲ್ಲ ಬಾ ಭಕ್ತವತ್ಸಲಾ ಬಾ |
ವಿಜಯವಿಠ್ಠಲ ಬಾ ಹಸೆಯ ಜಗುಲಿಗೆ10