ನೆರೆನಂಬಿ ಬೇಡುವೆನೊ ಶ್ರೀಹರಿಯೆ ನಿನ್ನ
ಪರಮ ಪರತರ ತವಬಿರುದುಗಳರಿದು ಪ
ಪುರನಾಶಗೈದು ನೀ ಪುರಸತಿಯರ್ವ್ರತ ಕೆಡಿಸಿ
ಪುರದೊಳಗೆ ತೋರಿದೆಲೋ ಪರಿಪರಿಯ ಲೀಲೆ
ಕರುಣಿಸದ್ಯಸಮಸುಖ ಪರಮ ದಯಾನಿಧಿಯೆ 1
ಸತಿ ಅಹಲ್ಯಾದೇವಿಗೆ ಪತಿಯಿತ್ತ ಶಾಪವನು
ಅತಿಹಿತದಿ ಪರಿಹರಿಸಿ ಗತಿಯಿತ್ತಿ ದೇವ
ಕ್ಷಿತಿಜಾತೆಪತಿ ನಿನ್ನ ಪತಿತಪಾವನಪಾದ
ನುತಿಪ ಭಕ್ತರಿಗೆ ಜವಮೃತ್ಯುಭಯತರಿವಿ 2
ಮೃಡಸಖ ಶ್ರೀರಾಮ ದೃಢದಿ ಭಜಿಪರ ಬೆಂ
ಬಿಡದಿರ್ದು ಕಾಯ್ವಂಥ ಕಡುದಯದ ದೇವ
ದೃಢದಿಂದ, ನಂಬಿದೆ ಒಡಲಾಸೆ ಪೂರೈಸು
ಜಡಜಾಕ್ಷ ಕಡುದಯದಿ ಪಿಡಿಯೆನ್ನ ಕೈಯ 3