ಬಂದು ಬಾರದಾಯಿತು ನೋಡಿ |
ಇಂದು ನರದೇಹ ಸಂಗವ ಮಾಡಿ ಪ
ಮುತ್ತಿನಂಥಾ ಜನುಮದಿ ಬಂದು |
ಚಿತ್ತ ಬೆರಿಯನು ವಿಷಯದಲಿಂದು 1
ಸಾಧು ಸಂತರ ಮೊರೆ ಹೋಗಲಿಲ್ಲಾ |
ಹಾದಿ ತಪ್ಪಿ ಮುಕ್ತಿಯು ಹೋಯಿತಲ್ಲಾ 2
ಆಹಾರ ನಿದ್ರೆ ಭಯ ರತಿಸಂದಾ |
ಅಹರ್ನಿಶಿಯಲಿದೇ ಮನದಂಗಾ 3
ನಾನಾ ಶಾಸ್ತ್ರದ ಮಾರ್ಗಕ ಹೋದೀ |
ಗಾಣದೆತ್ತಿನಂದದಿ ಕುರುಡಾದಿ 4
ತಂದೆ ಮಹಿಪತಿ ಸ್ವಾಮಿಯ ನೆನೆದು |
ಬಂದದ್ದು ಸಾರ್ಥಕ ಮಾಡದೆ ಬೆರೆದು 5